ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ ಕಾಕ್ಟೇಲ್ 2 ‘ ಚಿತ್ರ ಜೂನ್ 19ರಂದುವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಜೂನ್ 4ರಂದು ಬಿಡುಗಡೆಯಾಗಲಿದೆ. ಎರಡು ವಾರಗಳ ಬಳಿಕ ‘ಕಾಕ್ಟೇಲ್ 2’ ತೆರೆಗೆ ಬರಲಿದೆ. ಮ್ಯಾಡಾಕ್ ಫಿಲ್ಮ್ಸ್ ಸಂಸ್ಥೆಯಡಿ ದಿನೇಶ್ ವಿಜನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
2012ರಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡ ಕಾಕ್ಟೇಲ್ ಚಿತ್ರದ ಸೀಕ್ವೆಲ್ ‘ಕಾಕ್ಟೇಲ್ 2’. ಇಲ್ಲಿ ರಶ್ಮಿಕಾ ಮಂದಣ್ಣ ಜೊತೆ ಕೃತಿ ಸನೋನ್ ಹಾಗೂ ಶಾಹಿದ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ, ಸೈಫ್ ಅಲಿ ಖಾನ್ ಮತ್ತು ಡಿಯಾನಾ ಪೆಂಟಿ ಅಭಿನಯಿಸಿದ್ದರು.
ಹೋಮಿ ಅದಜಾನಿಯಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಪೋಸ್ಟರ್‌ನಲ್ಲಿ ರಶ್ಮಿಕಾ ಉಲ್ಲಾಸಭರಿತ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೋನ್ ಪಾತ್ರವೂ ಗ್ಲಾಮರಸ್ ಆಗಿರಬಹುದು ಎಂಬ ಸೂಚನೆ ಸಿಕ್ಕಿದೆ. ಸಿನಿಮಾದಲ್ಲಿ ರಶ್ಮಿಕಾ ಮತ್ತು ಕೃತಿ ಸನೋನ್ ನಡುವಿನ ಸಂಬಂಧ ಕಥೆಯ ಪ್ರಮುಖ ಅಂಶವಾಗಿರಬಹುದು ಎಂದು ಹೇಳಲಾಗುತ್ತಿದೆ. ತ್ರಿಕೋನ ಪ್ರೇಮಕಥೆಯ ಶೈಲಿಯಲ್ಲಿ ಸಿನಿಮಾ ಇರಬಹುದು ಎಂದು ಹೇಳಲಾಗುತ್ತಿದೆ.
ಮದುವೆಯ ನಂತರ ಬಿಡುಗಡೆಯಾಗುತ್ತಿರುವ ರಶ್ಮಿಕಾ ಮಂದಣ್ಣ ಅವರ ಮೊದಲ ಸಿನಿಮಾ ಇದಾಗಿದೆ. ಶೀಘ್ರದಲ್ಲೇ ಅವರು ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
_





Be the first to comment