ಸ್ಯಾಂಡಲ್ ವುಡ್ನ ಬ್ಲಾಕ್ ಕೋಬ್ರ ದುನಿಯಾ ವಿಜಯ್ ನಟನೆ, ನಿರ್ದೇಶನ, ನಿರ್ಮಾಣ ಎಲ್ಲಾ ಕ್ಷೇತ್ರಗಳಲ್ಲೂ ಸಕ್ಸಸ್ ಕಂಡ ಹೀರೋ… ಇದೀಗ ವಿಜಿ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ಸಿನಿಮಾರಂಗಕ್ಕೆ ಕರೆತಂದಿದ್ದಾರೆ. ಈಗಾಗಾಲೇ ಮೊದಲ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಸದ್ಯ ಎರಡನೇ ಪುತ್ರಿಯ ಸರದಿ. ಸಿಟಿ ಲೈಟ್ಸ್ ಸಿನಿಮಾ ಮೂಲಕ ವಿಜಿ 2ನೇ ಪುತ್ರಿ ಮೋನಿಷಾ ಸಿನಿಮಾರಂಗಕ್ಕೆ ಅದ್ದೂರಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾಗೆ ವಿನಯ್ ರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಂದು ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಸಿಟಿ ಲೈಟ್ಸ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ರಾಘವೇಂದ್ರ ರಾಜ್ ಕುಮಾರ್ ದಂಪತಿ ಕ್ಲ್ಯಾಪ್ ಮಾಡುವ ಮೂಲಕ ಮಗನ ಚಿತ್ರಕ್ಕೆ ಶುಭಕೋರಿದರು. ಡಾ ರಾಜ್ ಕುಮಾರ್ ಅವರ ಡ್ರೈವರ್ ಹನುಮಂತು ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ತಂಡಕ್ಕೆ ಶುಭಕೋರಿದರು. ಮುಹೂರ್ತಕ್ಕೆ ಯುವರಾಜ್ ಕುಮಾರ್, ನಿನಾಸಂ ಸತೀಶ್, ನವೀನ್ ಶಂಕರ್, ಪ್ರವೀಣ್ ತೇಜ್ , ಲೂಸ್ ಮಾದ ಯೋಗಿ, ಕೆ ಮಂಜು, ಬಿ ಸುರೇಶ್, ಕೆಪಿ ಶ್ರೀಕಾಂತ್, ಉಮಾಪತಿ ಸೇರಿದಂತೆ ಇನ್ನು ಅನೇಕರು ಭಾಗಿಯಾಗಿ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ವಿಶೇಷ ಎಂದರೆ ಸಿಟಿ ಲೈಟ್ಸ್ ಚಿತ್ರಕ್ಕೆ ದುನಿಯಾ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಮಗಳ ಚೊಚ್ಚಲ ಸಿನಿಮಾದ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ ನಿರ್ಮಾಣವನ್ನು ವಹಿಸಿಕೊಂಡಿದ್ದಾರೆ.
ಸಿಟಿ ಲೈಟ್ಸ್ ಸಿನಿಮಾದ ಫಸ್ಟ್ ಲುಕ್ ಈ ಮೊದಲೇ ಬಿಡುಗಡೆಯಾಗಿ ವೈರಲ್ ಆಗಿತ್ತು. ಇದೀಗ ಬಿಡುಗಡೆಯಾಗಿರುವ ಪೋಸ್ಟರ್ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದೆ. ಸಿಟಿ ಲೈಟ್ಸ್ ಟೈಟಲ್ ಜೊತೆಗೆ ‘ಜವಾಬ್ ದಾರಿ ದೀಪಗಳು’ ಟ್ಯಾಗ್ ಲೈನ್ ಗಮನ ಸೆಳೆಯುತ್ತಿದೆ. ಈ ಟ್ಯಾಗ್ ಲೈನ್ ನಲ್ಲಿ ಮೂರ್ನಾಲ್ಕು ವಿಷಯಗಳಿದ್ದು, ಜವಾಬ್ ಅಂದ್ರೆ ಸಮಾಜಕ್ಕೆ ಉತ್ತರ ನೀಡುವುದು ಎಂದರ್ಥ ಮತ್ತು ಅದೇ ಜವಾಬ್ ನ ಮೂಲಕ ಇಂದಿನ ಯುವ ಜನಾಂಗಕ್ಕೆ ಮುಂದೆ ಹೋಗಲು ಬೆಳಕಿನ ಹಾದಿಯನ್ನು ನೀಡುತ್ತವೆ ಎಂಬಂತಹ ಅರ್ಥ ಸಹ. ಬರುತ್ತದೆ.
ನಾಯಕ ವಿನಯ್ ಸಿಟಿ ಲೈಟ್ಸ್ ಮೂಲಕ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಸದ್ಯ ರಿಲೀಸ್ ಆಗಿರುವ ಲುಕ್ ನೋಡಿದ್ರೆ ಗೊತ್ತಾಗುತ್ತಿದೆ. ಇನ್ನು ನಟಿ ಮೋನಿಶಾ ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಆಗಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನಯ್ ಜತೆಗಿನ ಅವರ ಲುಕ್ ಕೂಡಾ ಇಂಟ್ರೆಸ್ಟಿಂಗ್ ಆಗಿದೆ.
ಮುಹೂರ್ತ ಬಳಿಕ ಮಾತನಾಡಿದ ವಿನಯ್, ‘ವಿಜಯ್ ಸರ್, ಚರಣ್ ರಾಜ್ ಹಾಗೂ ಮಾಸ್ತಿ ಅವರ ಜೊತೆ ಕೆಲಸ ಮಾಡಲು ತುಂಬ ಖುಷಿ ಆಗುತ್ತೆ. ಇವರೆಲ್ಲರ ಜೊತೆ ಕೆಲಸ ಮಾಡಬೇಕು ಎನ್ನುವುದು ಇತ್ತು, ಈಗ ಅವಕಾಶ ಸಿಕ್ಕಿದೆ. ಊರಿಂದ ಇಬ್ಬರು ಬೆಂಗಳೂರಿಗೆ ಬಂದು ಬಳಿಕ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವುದೆ ಸಿನಿಮಾ’ ಎಂದರು.
ಇನ್ನು ನಾಯಕಿ ಮೋನಿಷಾ ಮಾತನಾಡಿ, ‘ಈ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಲಂಡನ್ ನಲ್ಲಿ ಆಕ್ಟಿಂಗ್ ಕಲಿತ್ತಿದ್ದೇನೆ. ಆದರೆ ಈ ಸಿನಿಮಾದ ಪಾತ್ರಕ್ಕೆ ತಯಾರಿ ನಡೆಸುತ್ತಿದ್ದೇನೆ’ ಎಂದರು.
ಇನ್ನು ನಿರ್ದೇಶಕ ದುನಿಯಾ ವಿಜಯ್ ಮಾತನಾಡಿ, ‘ಜವಾಬ್ದಾರಿಗಳನ್ನು ದೀಪಗಳಾಗಿ ಮಾಡಿ ನನ್ನ ಇಬ್ಬರೂ ಮಕ್ಕಳಾದ ಮೋನಿಷಾ ಮತ್ತು ಮೋನಿಕಾ ಕೈಗೆ ಕೊಟ್ಟಿದ್ದೇನೆ. ಇಬ್ಬರೂ ಉಳಿಸಿಕೊಂಡು ಹೋಗ್ತಾರೆ ಇನ್ನುವ ನಂಬಿಕೆ ಇದೆ. ಇನ್ನು ವಿನಯ್ ತುಂಬಾ ಒಳ್ಳೆಯ ವ್ಯಕ್ತಿ. ನನ್ನ ಜೊತೆ ನನ್ನ ಹಾಗೆ ಇರುವ ಜೀವ. ಅಣ್ಣಾವ್ರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು ನಾನು. ಈಗ ಅವರ ಮೊಮ್ಮಕ್ಕಳಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ನಾನು ಯಾವುದು ತಂಡ ಕಟ್ಟಿಲ್ಲ, ಒಬ್ಬನೆ ಬೆಳೆದವನು ನಾನು, ನನಗೆ ಯಾರ ಸಪೋರ್ಟ್ ಇರಲಿಲ್ಲ, ನನ್ನ ಛಲ ನನ್ನನ್ನು ಇಲ್ಲಿಗೆ ಕರ್ಕೊಂಡು ಬಂದಿದೆ’ ಎಂದರು.
ವಿಜಯ್ ಕುಮಾರ್ ಈ ಹಿಂದೆ ನಿರ್ದೇಶನ ಮಾಡಿದ್ದ ಸಲಗ, ಭೀಮ ಸಿನಿಮಾದಲ್ಲಿ ನಗರ ಜೀವನದ ಒಳಹುಗಳನ್ನು ಬಿಚ್ಚಿಟ್ಟಿದ್ದರು. ಈ ಬಾರಿಯೂ ಸಹ ಸಿಟಿ ಲೈಟ್ಸ್ ಮೂಲಕ ಸಿಟಿಯ ಮತ್ತೊಂದು ಮಜಲನ್ನು ತೆರೆದೆಡಲಿದ್ದಾರೆ ವಿಜಯ್.
ಸಲಗ, ಭೀಮ ಸಿನಿಮಾಗಳಲ್ಲಿ ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತ ಪ್ರಮುಖ ಪಾತ್ರ ವಹಿಸಿದ್ದವು. ಈ ಬಾರಿಯೂ ಆ ಮ್ಯಾಜಿಕ್ ಮುಂದುವರೆಯಲಿದೆ. ಇನ್ನು ಈ ಸಿನಿಮಾದಲ್ಲಿ ಹಲವು ವಿಶೇಷ ಪಾತ್ರಗಳಿದ್ದು, ಅವುಗಳಲ್ಲಿ ಅನೇಕ ಹೊಸ ಕಲಾವಿದರು ಕಾಣಸಿಕೊಳ್ಳುತ್ತಿರುವುದು ವಿಶೇಷ. ಕಾಕ್ರೋಚ್ ಖ್ಯಾತಿಯ ಸುಧಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ.
Be the first to comment