ಸಿನಿಮಾ ವಿಮರ್ಶೆ :ರಂಜನೆ ಜೊತೆ ಸಂದೇಶ

YAJAMANA MOVIE REVIEW -BCINEMAS – ರಂಜನೆ ಜೊತೆ ಸಂದೇಶ

ಸಿನಿಮಾ: ಯಜಮಾನ  ನಿರ್ದೇಶನ: ಹರಿಕೃಷ್ಣ, ಪಿ.ಕುಮಾರ್  ನಿರ್ಮಾಣ: ಶೈಲಜಾ ನಾಗ್ ಮತ್ತು ಬಿ.ಸುರೇಶ  ಸಂಗೀತ: ಹರಿಕೃಷ್ಣ  ಛಾಯಾಗ್ರಹಣ: ಶ್ರೀಷ ಕೂಡುವಳ್ಳಿ  ತಾರಾಬಳಗ: ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ದೇವರಾಜ್, ರವಿಶಂಕರ್, ಸಾಧುಕೋಕಿಲ

ಜಾಗತೀಕರಣದ ನಂತರ ದೇಶದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾದವು. ಬಹುರಾಷ್ಟ್ರೀಯ ಕಂಪನಿಗಳ ಮೇಲಾಟದಿಂದಾಗಿ ದೇಸಿ ಮಾರುಕಟ್ಟೆ ಕುಸಿಯಿತು. ಇಂಥದ್ದೊಂದು ಹಿನ್ನೆಲೆಯೊಂದಿಗೆ ’ಯಜಮಾನ’ ಚಿತ್ರಕಥೆ ಹೆಣೆಯಲಾಗಿದೆ. ಹೀರೋ ದರ್ಶನ್ ಇಮೇಜು ಗಮನದಲ್ಲಿಟ್ಟುಕೊಂಡು ಕತೆ ಮಾಡಿದ್ದು, ವ್ಯಾಪಾರಿ ಚಿತ್ರಕ್ಕೆ ಅಗತ್ಯವಿರುವ ಎಲ್ಲಾ ಮಸಾಲೆಗಳನ್ನೂ ಹದವರಿತು ಬೆರೆಸಲಾಗಿದೆ. ಆಕ್ಷನ್‌ಗೆ ಹೆಚ್ಚಿನ ಪ್ರಾಶಸ್ತ್ಯವಿದೆಯಾದರೂ ಪ್ರೇಕ್ಷಕರ ಮೂಡ್ ಹಗುರಗೊಳಿಸಲು ಅಲ್ಲಲ್ಲಿ ತಿಳಿಹಾಸ್ಯದ ಲೇಪವೂ ಇದ್ದು, ಯಾವ ಹಂತದಲ್ಲೂ ಸಿನಿಮಾ ಪ್ರೇಕ್ಷಕರಿಗೆ ಭಾರ ಎನಿಸದು.

ಹತ್ತಾರು ಗ್ರಾಮಗಳ ರೈತರು ಸೇರಿ ರೂಪಿಸಿದ ಸಹಕಾರ ಸಂಘ. ಗಾಣದಿಂದ ಎಣ್ಣೆ ತೆಗೆದು ಅರ್ಹ ಬೆಲೆ ನಿಗಧಿಪಡಿಸಿ ಮಾರಾಟ ಮಾಡುವುದು ಅಲ್ಲಿನ ಪರಿಪಾಠ. ಪ್ರತಿಯೊಬ್ಬ ರೈತನೂ ಅಲ್ಲಿ ಯಜಮಾನ. ಸಾಮಾಜಿಕ ನ್ಯಾಯದ ಕಲ್ಪನೆಯಲ್ಲಿ ಬದುಕು ಸಾಗಿದೆ. ಅದೇ ವೇಳೆ ದೇಶವಿಡೀ ವ್ಯಾಪಿಸಿರುವ ಬ್ರ್ಯಾಂಡ್ ಸಹಕಾರ ಸಂಘದ ರೈತರಿಗೆ ಆಮಿಷ ಒಡ್ಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಯಜಮಾನನಾಗಿದ್ದ ರೈತ ಕಂಪನಿಯ ಅವಲಂಬಿತನಾಗುತ್ತಾನೆ. ತನ್ನ ಸ್ವಂತ ಬ್ರ್ಯಾಂಡ್ ಕಳೆದುಕೊಂಡು ಕ್ರಮೇಣ ಸಂಕಷ್ಟಕ್ಕೀಡಾಗುವ ಹಾದಿಯಲ್ಲಿನ ಹೋರಾಟವೇ ಚಿತ್ರದ ಕಥಾವಸ್ತು. ಹುಲಿಯೂರಿನ ಕೃಷ್ಣ ದೊಡ್ಡ ಕಂಪನಿಯ ವಿರುದ್ಧ ನಿಂತು ತನ್ನ ಸ್ವಾಭಿಮಾನ, ಅಸ್ತಿತ್ವವನ್ನು ಸಾಬೀತು ಮಾಡುವುದರೊಂದಿಗೆ ಚಿತ್ರ ಕೊನೆಯಾಗುತ್ತದೆ.

ಚಿತ್ರದ ಟೈಟಲ್ ಕಾರ್ಡ್‌ನ ನಿರ್ದೇಶಕರ ಶೀರ್ಷಿಕೆಯಡಿ ಪಿ.ಕುಮಾರ್ ಮತ್ತು ಹರಿಕೃಷ್ಣ ಇಬ್ಬರ ಹೆಸರುಗಳೂ ಇವೆ. ಕೊನೆಯ ಹಂತದಲ್ಲಿ ಹರಿಕೃಷ್ಣ ಅವರು ನಿರ್ದೇಶನದ ಹೊಣೆ ಹೊತ್ತು ಚಿತ್ರ ಪೂರ್ಣಗೊಳಿಸಿದರು ಎಂದೂ ಹೇಳಲಾಗುತ್ತದೆ. ಆದರೆ ಈ ಗೊಂದಲದಿಂದಾಗಿ ಚಿತ್ರಕ್ಕೇನೂ ನಷ್ಟವಾಗಿಲ್ಲ. ನಿರ್ದೇಶನದ ಹೊಣೆಯೊಂದಿಗೆ ಸಂಗೀತ ಸಂಯೋಜನೆಯಲ್ಲೂ ಹರಿಕೃಷ್ಣ ಮಿಂಚಿದ್ದಾರೆ. ಚಿತ್ರದ ಮೂರ್ನಾಲ್ಕು ಹಾಡುಗಳು ನೋಡಲೂ ಹಿತವಾಗಿದ್ದು, ಆಲಿಸಲೂ ಇಂಪಾಗಿವೆ. ಛಾಯಾಗ್ರಾಹಕ ಶ್ರೀಷ ಕೂಡುವಳ್ಳಿ ತಮ್ಮ ಕ್ಯಾಮರಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ತಮ್ಮ ಇಮೇಜಿಗೆ ಸ್ಕೋಪ್ ಇರುವಂತಹ ಪಾತ್ರವನ್ನು ದರ್ಶನ್ ಮುತುವರ್ಜಿಯಿಂದ ನಿಭಾಯಿಸಿದ್ದಾರೆ. ಎರಡು ಹಾಡುಗಳಲ್ಲಿ ಡ್ಯಾನ್ಸ್‌ಗೂ ಹೆಚ್ಚು ಅವಕಾಶವಿದ್ದು, ದರ್ಶನ್ ಮೈಚಳಿ ಬಿಟ್ಟು ಕುಣಿದಿದ್ದಾರೆ. ಬಿರುಸಾದ ಆಕ್ಷನ್ ದೃಶ್ಯಗಳು ಅಭಿಮಾನಿಗಳಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ.

ಇಬ್ಬರು ನಾಯಕಿಯರಿದ್ದರೂ, ತ್ರಿಕೋನ ಪ್ರೇಮವಿಲ್ಲ. ಸಾಧುಕೋಕಿಲ ಮತ್ತು ತಂಡದ ಹಾಸ್ಯ ಮುದ ನೀಡಿದರೆ, ನಟ ರವಿಶಂಕರ್ ಕಾಮಿಡಿ-ವಿಲನ್ ರೋಲ್ ವರ್ಕ್ ಆಗಿದೆ.

Bcinemas Rates 4/5

-Shashidhar Sajjan

 

Be the first to comment

Leave a Reply

Your email address will not be published. Required fields are marked *

Translate »
error: Content is protected !!