ಸಿನಿಮಾ: ಬೆಲ್ ಬಾಟಂ ನಿರ್ದೇಶನ: ಜಯತೀರ್ಥ ನಿರ್ಮಾಣ: ಸಂತೋಷ್ಕುಮಾರ್ ಕೆ.ಸಿ. ಸಂಗೀತ: ಅಜನೀಶ್ ಲೋಕನಾಥ್ ಛಾಯಾಗ್ರಹಣ: ಅರವಿಂದ ಕಶ್ಯಪ್ ತಾರಾಬಳಗ: ರಿಷಬ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಶಿವಮಣಿ, ಪಿ.ಡಿ.ಸತೀಶ್ ಚಂದ್ರ, ಪ್ರಮೋದ್ ಶೆಟ್ಟಿ ಮತ್ತಿತರರು.
————-
ಎಂಬತ್ತರ ದಶಕ ಪತ್ತೇದಾರಿ ಕಾದಂಬರಿಗಳು ಜನಪ್ರಿಯವಾಗಿದ್ದ ಅವಧಿ. ಈ ಕತೆಗಳು ಸಿನಿಮಾಗೆ ಪ್ರೇರಣೆಯಾದವು. ಜಾಗತಿಕವಾಗಿ ಮಾತ್ರವಲ್ಲದೆ ಭಾರತದ ಪ್ರಾದೇಷಿಕ ಭಾಷೆಗಳಲ್ಲಿಯೂ ತಯಾರಾದ ಪತ್ತೇದಾರಿ ಸಿನಿಮಾಗಳು ಜನಮನ್ನಣೆ ಗಳಿಸಿದವು. ಬದಲಾದ ಕಾಲಮಾನ, ಟ್ರೆಂಡ್ಗೆ ಸರಿಯಾಗಿ ಭಿನ್ನ ವಸ್ತುಗಳು ಸಿನಿಮಾಗೆ ಚಿತ್ರಕಥೆಯಾಗಿದ್ದು ಸಹಜವೇ ಆಗಿತ್ತು. ಎಂಬತ್ತರ ಕಾಲಘಟ್ಟದ ಪತ್ತೇದಾರಿ ಕತೆಯೊಂದನ್ನು ಸಿನಿಮಾ ಮಾಡಿ ಪ್ರೇಕ್ಷಕರ ಎದುರಿಡುವುದು ಸುಲಭವಲ್ಲ. “ಬೆಲ್ ಬಾಟಂ” ತಂಡ ಇದನ್ನು ಸಾಧ್ಯವಾಗಿಸಿದೆ.
ಪತ್ತೇದಾರಿಕೆಯಲ್ಲಿ ಅತ್ಯಾಸಕ್ತಿ ಇರುವ ದಿವಾಕರನ ಪಾತ್ರದ ಸುತ್ತ ನಡೆಯುವ ಘಟನಾವಳಿಗಳನ್ನು ನಿರ್ದೇಶಕ ಜಯತೀರ್ಥ ತಿಳಿಹಾಸ್ಯದೊಂದಿಗೆ ನಿರೂಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಕಾಣೆಯಾಗುವ ಒಡವೆಗಳನ್ನು ಪತ್ತೆ ಮಾಡುವ ಕೆಲಸದಲ್ಲಿ ದಿವಾಕರನ ಸಾಹಸಗಳು, ಆರೋಪಿಗಳ ಹುಡುಕಾಟದಲ್ಲಿನ ಗೊಂದಲ, ಈ ಮಧ್ಯೆ ಪ್ರಿಯತಮೆ ಕುಸುಮಳ ಮೇಲೇ ಸಂದೇಹ ಪಡುವ ದಿವಾಕರ… ಹೀಗೆ ವಿಶಿಷ್ಟ ತಿರುವುಗಳಿಂದ ಕತೆ ಅಂತಿಮ ಹಂತದವರೆಗೂ ರೋಚಕತೆ ಕಾಯ್ದುಕೊಳ್ಳುತ್ತದೆ. ಎರಡು, ಮೂರು ಕಡೆ ಚಿತ್ರಕಥೆಗೆ ಕೊಂಚ ವೇಗ ಬೇಕಿತ್ತು ಎನಿಸುವುದು ಹೌದು.
ಎಂಬತ್ತರ ಕಾಲಘಟ್ಟದ ಕತೆಯನ್ನು ಪ್ರಸ್ತುತ ದಿನಗಳ ಪ್ರೇಕ್ಷಕರಿಗೆ ಹೇಳುವುದು ಇಲ್ಲಿನ ಮೊದಲ ಸವಾಲು. ಬಹುಶಃ ಚಿತ್ರ ಕೈಗೆತ್ತಿಕೊಂಡಾಗಲೇ ನಿರ್ದೇಶಕರು ಹಾಗೂ ಚಿತ್ರತಂಡದ ಇತರೆ ತಂತ್ರಜ್ಞರು ಈ ಬಗ್ಗೆ ಗಂಭೀರವಾಗಿ ಆಲೋಚಿಸಿರುತ್ತಾರೆ. ಆದರೆ ತಂತ್ರಜ್ಞರೆಲ್ಲರೂ ಟಿ.ಕೆ.ದಯಾನಂದರ ಕತೆಗೆ ಬದ್ಧವಾಗಿ, ಕ್ರಿಯಾಶೀಲತೆಯಿಂದ ಕೆಲಸ ಮಾಡಿರುವುದರಿಂದ ’ಪತ್ತೇದಾರಿಕೆ’ಯಲ್ಲಿ ಪ್ರೇಕ್ಷಕರಿಗೆ ಲೋಪ ಕಾಣಿಸುವುದಿಲ್ಲ. ಬದಲಿಗೆ ಏಕತಾನತೆಯ ಕಥಾವಸ್ತುಗಳ ಸಿನಿಮಾಗಳ ಮಧ್ಯೆ ಇದು ಭಿನ್ನವೆನಿಸುತ್ತದೆ.
ಪೂರ್ಣಪ್ರಮಾಣದ ನಾಯಕನಟನಾಗಿ ರಿಷಬ್ ಶೆಟ್ಟಿ ಮಿಂಚಿದ್ದಾರೆ. ರಂಗಭೂಮಿ ನಂಟಿರುವ ರಿಷಬ್ಗೆ ಪಾತ್ರನಿರ್ವಹಣೆ ಯಾವ ಹಂತದಲ್ಲೂ ಕಷ್ಟವಾದಂತಿಲ್ಲ. ನಾಯಕಿ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇದೆ. ಆದರೆ ನಾಯಕಿ ಹರಿಪ್ರಿಯಾ ಅದೇಕೋ ಕೆಲವೆಡೆ ಸಪ್ಪೆ ಎನಿಸುತ್ತಾರೆ. ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಶಿವಮಣಿ ಪ್ರಮುಖ ಪಾತ್ರಗಳಲ್ಲಿ ಗಮನಸೆಳೆಯುತ್ತಾರೆ. ಚಿತ್ರದ ’ಬೊಗಸೆತುಂಬ’ ಹಾಡು ಚಿತ್ರಮಂದಿರದಿಂದ ಹೊರಬಿದ್ದ ನಂತರವೂ ನೆನಪಾಗುತ್ತದೆ. ರೆಟ್ರೋ ಹಿನ್ನೆಲೆ ಸಂಗೀತದೊಂದಿಗೆ ಚಿತ್ರಕಥೆಯನ್ನು ಚೆಂದಗೊಳಿಸಿರುವ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಅವರಿಗೆ ಚಪ್ಪಾಳೆ ಸಿಗಬೇಕು. ಒಟ್ಟಾರೆ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಡಿಟೆಕ್ಟೀವ್ ದಿವಾಕರ್ ಗೆದ್ದಿದ್ದಾನೆ.
-Bheemaraya
Pingback: dig this