ಚೌಕಿದಾರ್

Movie Review: ಚೌಕಿದಾರ್ ನಲ್ಲಿದೆ ತಂದೆ ಮಗನ ಪ್ಯಾರ್

ಚಿತ್ರ: ಚೌಕಿದಾರ್
ನಿರ್ದೇಶನ: ಚಂದ್ರಶೇಖರ ಬಂಡಿಯಪ್ಪ
ನಿರ್ಮಾಣ: ಕಲ್ಲಹಳ್ಳಿ ಚಂದ್ರಶೇಖರ್
ತಾರಾಗಣ: ಸಾಯಿಕುಮಾರ್, ಪೃಥ್ವಿ ಅಂಬಾರ್, ಧನ್ಯಾ ಮೊದಲಾದವರು…
ರೇಟಿಂಗ್: 3.5/5

‘ಅಪ್ಪಾ.. ಐ ಲವ್ಯು ಪಾ..’ ಜನಪ್ರಿಯ ಹಾಡಿನ ಸಾಲಿನಲ್ಲಿ ರಾತ್ರಿ ಮನೆಯಲಿ ಚೌಕಿದಾರ್ ಎಂದು ಬರೆದಿದ್ದಾರೆ ನಾಗೇಂದ್ರ ಪ್ರಸಾದ್. ಈ ಚಿತ್ರದಲ್ಲಿಯೂ ಅಷ್ಟೇ. ತಂದೆಯೇ ಈ ಸಿನಿಮಾದ ಚೌಕಿದಾರ. ಮಗನ ಬದುಕಿಗೆ ತಂದೆಯೇ ಆಧಾರ.

ವೃತ್ತಿಬದುಕಿನ ಐವತ್ತನೇ ವರ್ಷದಲ್ಲಿ ನಾಯಕ‌ ಸಮಾನವಾದ ತಂದೆಯ ಪಾತ್ರವಾಗಿ ಕಾಣಿಸಿದ್ದಾರೆ ಸಾಯಿಕುಮಾರ್. ಆರಂಭದಲ್ಲಿ ದಾರಿ ತಪ್ಪಿದ ಮಗನಂತೆ ಕಾಣಿಸುವ ಪೃಥ್ವಿ ಅಂಬಾರ್ ಬಳಿಕ ತಾವು ಹೀರೋ ಫಿಗರ್ ಎನ್ನುವುದನ್ನು ಸಾಬೀತು ಪಡಿಸುತ್ತಾರೆ. ಒಟ್ಟಿನಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಎಲ್ಲ ವಿಧದಲ್ಲೂ ಆಕರ್ಷಿಸುವ ಚಿತ್ರವಾಗಿ ಚೌಕಿದಾರ್ ಮೂಡಿ ಬಂದಿದೆ.

ಪ್ರಕಾಶ್ ಗೌಡ ಮತ್ತು ಸುಧಾ ದಂಪತಿಯ ಒಬ್ಬನೇ ಒಬ್ಬ ಪುತ್ರ ಸಿದ್ದಾರ್ಥ. ಪ್ರಕಾಶ್ ಗೆ ಈ ಮಗನೆಂದರೆ ಪ್ರಾಣ. ಮಗನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ಅಪ್ಪನ‌ ಈ ಗುಣದಿಂದಾಗಿಯೇ ಮಗ ದಾರಿ ತಪ್ಪಲು ಶುರುವಾಗುತ್ತಾನೆ. ಆದರೆ ಇಂಥ ಮಗನಿಗೆ ಪ್ರಾಯಶ್ಚಿತ್ತ ಮೂಡುವ ಸಂದರ್ಭವೊಂದು ಸೃಷ್ಟಿಯಾಗುತ್ತದೆ. ಅದುವೇ ಚಿತ್ರದ ಹೈಲೈಟ್. ಅದರ ಬಳಿಕದ ಪ್ರತಿಯೊಂದು ದೃಶ್ಯಗಳು ಕೂಡ ಪ್ರೇಕ್ಷಕರಲ್ಲಿ ‌ರೋಮಾಂಚನ ಮೂಡಿಸುತ್ತಾ ಸಾಗುತ್ತದೆ.

ಸಾಯಿಕುಮಾರ್ ಅಪ್ಪ ಪ್ರಕಾಶ್ ಗೌಡನಾಗಿ ಅಪರೂಪದ ನಟನೆ ನೀಡಿದ್ದಾರೆ. ಪುತ್ರ ಸಿದ್ದಾರ್ಥನಾಗಿ ಪೃಥ್ವಿ ಅಂಬಾರ್ ಕೂಡ ಎರಡೆರಡು ಶೇಡ್ ನಲ್ಲಿ ಮನಗೆಲ್ಲುತ್ತಾರೆ. ಪೃಥ್ವಿ ಅಂಬಾರ್ ತಾಯಿಯಾಗಿ ಚೈತ್ರದ ಪ್ರೇಮಾಂಜಲಿ ಶ್ವೇತಾ ಮರಳಿ ಬಂದಿದ್ದಾರೆ.‌ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಧನ್ಯಾ ರಾಮ್ ಕುಮಾರ್ ಪಾತ್ರವಾಗಿ‌ ನೆನಪಲ್ಲಿ ಉಳಿಯುತ್ತಾರೆ. ಉಳಿದಂತೆ ಸುಧಾರಾಣಿ, ಧರ್ಮ, ಗಿಲ್ಲಿನಟ ಮೊದಲಾದವರ ಆಕರ್ಷಕ ತಾರಾಗಣ ಚಿತ್ರದಲ್ಲಿದೆ.

ರಥಾವರದಂಥ ಆ್ಯಕ್ಷನ್ ಚಿತ್ರದ ಮೂಲಕ ಗುರುತಿಸಿಕೊಂಡ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಈ‌ ಬಾರಿ ಎಮೋಶನಲ್ ಡ್ರಾಮದ ಮೂಲಕ ಮನ ಸೆಳೆದಿದ್ದಾರೆ. ಸಚಿನ್ ಬಸ್ರೂರು ಸಂದರ್ಭಕ್ಕೆ ಪೂರಕವಾದ ಸಂಗೀತ ನೀಡಿ‌ ಮನಗೆಲ್ಲುತ್ತಾರೆ. ಸಾಹಸ ಸನ್ನಿವೇಶಗಳು ಪೃಥ್ವಿ ಅಂಬಾರ್ ಅವರ ಮಾಸ್ ಇಮೇಜ್ ಉಳಿಸಿಕೊಳ್ಳಲು ನೆರವಾಗಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!