ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ” ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಕನಸಿನ ರಾಣಿ ಮಾಲಾಶ್ರೀ, ಡಾಲಿ ಧನಂಜಯ, ಗುರುಕಿರಣ್, ರಿಷಿ, ಪ್ರಥಮ್, ಅಮೂಲ್ಯ, ಧೀರೇನ್ ರಾಮಕುಮಾರ್, ತಿಲಕ್, ಮಾಲಾಶ್ರೀ ಪುತ್ರಿ ಆರಾಧನಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಪದಾಧಿಕಾರಿಗಳಾದ ಪ್ರವೀಣ್ ಕುಮಾರ್, ಚಿಂಗಾರಿ ಮಹದೇವ್, ನಿರ್ಮಾಪಕ ಕಿರಣ್ ಬರ್ತೂರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, “ಛೂ ಮಂತರ್” ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಆಗಮಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತು ಆರಂಭಿಸಿದ ನಿರ್ಮಾಪಕ ತರುಣ್ ಶಿವಪ್ಪ, ಸಂಕ್ರಾಂತಿ ಸಮೀಪದಲ್ಲಿ ಅಂದರೆ ಜನವರಿ 10 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಬೇರೆ ಭಾಷೆಗಳ ಚಿತ್ರಗಳು ಬಿಡುಗಡೆಯಾಗಲಿದೆ. ಹಾಗಾಗಿ ನಮಗೆ ಸಾಕಷ್ಟು ಚಿತ್ರಮಂದಿರಗಳು ಸಿಗುತ್ತಿಲ್ಲ. ಮಂಡ್ಯದಂತಹ ಕನ್ನಡಿಗರೇ ಹೆಚ್ಚಿರುವ ಊರಿನಲ್ಲೂ ಚಿತ್ರಮಂದಿರ ಸಿಗದಿರುವುದು ತುಂಬಾ ಬೇಸರವಾಗಿದೆ. ಈ ಕುರಿತು ನಾವು ವಾಣಿಜ್ಯ ಮಂಡಳಿ ಮೊರೆ ಹೋಗಿದ್ದು, ನಮಗೆ ಸಾಕಷ್ಟು ಚಿತ್ರಮಂದಿರಗಳು ಸಿಗುವ ಭರವಸೆ ಇದೆ ಎಂದರು.
ಚಿತ್ರತಂಡದ ಸಹಕಾರದಿಂದ “ಛೂಮಂತರ್” ಚೆನ್ನಾಗಿ ಮೂಡಿಬಂದಿದೆ ಎಂದು ನಿರ್ದೇಶಕ ನವನೀತ್ ತಿಳಿಸಿದರು.
ಈ ಚಿತ್ರದಲ್ಲಿ ನಾನೊಬ್ಬನೇ ನಾಯಕನಲ್ಲ. ಇದರಲ್ಲಿ ಅಭಿನಯಿಸಿರುವ ಎಲ್ಲರೂ ನಾಯಕರೆ. ಒಟ್ಟಾರೆ ಇಡೀ ಚಿತ್ರತಂಡದ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ನಮ್ಮ ಚಿತ್ರ ಎಲ್ಲರ ಮನ ತಲುಪಿದೆ. ಚಿತ್ರ ಗೆಲ್ಲುವ ಭರವಸೆ ಇದೆ. ಇಂದು ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಇಷ್ಟು ಜನ ಕಲಾವಿದರು ಬಂದಿರುವುದು ತುಂಬಾ ಖುಷಿಯಾಗಿದೆ. ಎಲ್ಲರಿಗೂ ಧನ್ಯವಾದ ಎಂದರು ನಾಯಕ ಶರಣ್.
ಚಿತ್ರದಲ್ಲಿ ಅಭಿನಯಿಸಿರುವ ಪ್ರಭು ಮುಂಡ್ಕರ್, ಮೇಘನಾ ಗಾಂವ್ಕರ್, ರಂಜನಿ ರಾಘವನ್, ನರಸಿಂಹ ಜಾಲಹಳ್ಳಿ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅವಿನಾಶ್ ಬಸತ್ಕೂರ್ ಸೇರಿದಂತೆ ಅನೇಕ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶರಣ್, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್, ರಂಜನಿ ರಾಘವನ್, ನರಸಿಂಹ ಜಾಲಹಳ್ಳಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ “ಛೂ ಮಂತರ್” ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
Be the first to comment