ಕೊರೋನಾ ಲಾಕ್‍ಡೌನ್ ನಂತರ ಆರಂಭವಾದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ. ಕೋರೋನಾ ಸಮಯದಲ್ಲೇ ತನ್ನ ಮುಹೂರ್ತ ಆಚರಿಸಿಕೊಂಡು ಈಗ ಶೂಟಿಂಗ್ ಕೂಡ ಮುಗಿಸಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಅವರೇ ನಿರ್ದೇಶನ ಮಾಡಿದ್ದಾರೆ. ಆಸ್ಕರ್ ಕೃಷ್ಣ ಅವರೇ ಚಿತ್ರದ ನಾಯಕನಟರಾಗಿ ಸಹ ಅಭಿನಯಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಈಗಾಗಲೇ ತನ್ನ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಂಡಿದೆ.
ಆ ಮೂಲಕ ಲಾಕ್ ಡೌನ್ ನಂತರ ಚಿತ್ರೀಕರಣ ಮುಗಿಸಿದ ಮೊದಲ ಕನ್ನಡ ಚಿತ್ರವೂ ಇದಾಗಿದೆ. ಬೆಂಗಳೂರು, ತುಮಕೂರು ಗಾಗೂ ಕುಣಿಗಲ್ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ ಈ ಚಿತ್ರತಂಡವು ಇತ್ತೀಚೆಗೆ ಕೊನೆಯ ದಿನದ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದು ಸಂಭ್ರಮಿಸಿದೆ.
ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಕಂಗೆಟ್ಟಿದ್ದ ಸಿನಿ ಕಾರ್ಮಿಕರಿಗೆ ಹಾಗೂ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ಈ ಚಿತ್ರದ ಮೂಲಕ ಕೆಲಸ ದೊರೆತು ಜೀವನಕ್ಕೆ ಆಸರೆಯಾಗಿತ್ತು. ಅಲ್ಲದೆ ಇತರೆ ಚಿತ್ರಗಳು ಚಿತ್ರೀಕರಣ ಪ್ರಾರಂಭಿಸಲು ಪ್ರೇರೇಪಣೆಯಾಯಿತು. ಸದ್ಯದಲ್ಲೇ ಚಿತ್ರಮಂದಿರಗಳು ಓಪನ್ ಆಗಲಿದ್ದು, ಥೇಟರ್ ತೆರೆದ ಕೂಡಲೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ.
ಇದೊಂದು ಕಾಮಿಡಿ, ಕ್ರೈಂ ಕಥಾಹಂದರವುಳ್ಳ ಚಿತ್ರವಾಗಿದ್ದು, ಸ್ನೇಹ, ಪ್ರೀತಿ, ದ್ವೇಷ, ರಾಜಕೀಯ, ಸಾಮಾಜಿಕ ಜೀವನ, ಕಾನೂನು ವ್ಯವಸ್ಥೆ ಇದೆಲ್ಲವನ್ನೂ ಚಿತ್ರದ ಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಐದಾರು ತಿಂಗಳುಗಳಿಂದ ಥಿಯೇಟರುಗಳಲ್ಲಿ ಸಿನಿಮಾ ನೋಡದಂತಾಗಿರುವ ಚಿತ್ರಪ್ರೇಮಿಗಳಿಗೆ ಇದೊಂದು ಫುಲ್‍ಮೀಲ್ಸ ಆಗಲಿದೆ ಎನ್ನುವುದು ನಿರ್ದೇಶಕರ ಮಾತು. ಸೆವೆನ್‍ರಾಜ್ ಈ ಚಿತ್ರವನ್ನು ನಿರ್ಮಿಸಿರುವುದರ ಜೊತೆಗೆ ವಿಶೇಷ ಪಾತ್ರವನ್ನೂ ನಿರ್ವಹಿಸಿದ್ದಾರೆ.
ಲೋಕೇಂದ್ರ ಸೂರ್ಯ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಅವರೂ ಸಹ ಪಾತ್ರವೊಂದನ್ನೂ ನಿಭಾಯಿಸಿದ್ದಾರೆ. ಮಲಯಾಳಿ ಚೆಲುವೆ ಗೌರಿನಾಯರ್ ನಾಯಕಿಯಾಗಿದ್ದು, ಉಳಿದಂತೆ ಅನಂತ್ ಆರ್ಯನ್‍ರ ಸಂಗೀತ, ಗಗನ್ ಕುಮಾರ್‍ರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ಅಕುಲ್ ನೃತ್ಯ, ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ಸಹನಿರ್ದೇಶನ ಈ ಚಿತ್ರಕ್ಕಿದೆ.
Pingback: Digital Transformation