ಚಿತ್ರಲೋಕಗೆ ಯೂಟ್ಯೂಬ್ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ

ಕನ್ನಡ ಚಿತ್ರರಂಗದ ಮೊದಲ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರಲೋಕ ಡಾಟ್‍ಕಾಮ್, ಇನ್ನೊಂದು ಹೊಸ ಮೈಲಿಗಲ್ಲು ಸಾಧಿಸಿದೆ. ಯೂಟ್ಯೂಬ್‍ನಲ್ಲಿ ಚಿತ್ರಲೋಕ ಚಾನಲ್‍ಗೆ ಒಂದು ಲಕ್ಷ ಸಬ್‍ಸ್ಕ್ರೈಬರ್ಸ್ ಆಗಿದ್ದು, ಈ ಸಾಧನೆಯನ್ನು ಗುರುತಿಸಿರುವ ಯೂಟ್ಯೂಬ್ ಸಂಸ್ಥೆಯು, ಯೂಟ್ಯೂಬ್ ಸಿಲ್ವರ್ ಕ್ರಿಯೇಟರ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಯೂಟ್ಯೂಬ್‍ನಲ್ಲಿ ಯಾವುದೇ ಚಾನಲ್‍ಗೆ ಒಂದು ಲಕ್ಷ ಚಂದಾದಾರರಾದ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪ್ರಶಸ್ತಿಯನ್ನು ಪಡೆದಿರುವ ಕನ್ನಡದ ಕೆಲವು ಬೆರಳಣಿಕೆಯಷ್ಟು ಚಾನಲ್‍ಗಳಲ್ಲಿ ಚಿತ್ರಲೋಕ ಸಹ ಒಂದಾಗಿರುವುದು ವಿಶೇಷ.

ಳೆದ ಕೆಲವು ತಿಂಗಳುಗಳಲ್ಲಿ, ಯೂಟ್ಯೂಬ್‍ನ ಚಿತ್ರಲೋಕ ಚಾನಲ್‍ನಲ್ಲಿ ಹಲವು ವಿಭಿನ್ನ ಮತ್ತು ವಿನೂತನ ಹೆಜ್ಜೆಗಳನ್ನು ಇಟ್ಟಿದೆ. ಡಾ. ರಾಜಕುಮಾರ್ ಅವರ ಕಿಡ್ನಾಪ್ ಕುರಿತು ಯಾರಿಗೂ ಗೊತ್ತಿಲ್ಲದ ಮತ್ತು ಇದುವರೆಗೂ ಯಾರೂ ಕೇಳರಿಯದ ಹಲವು ವಿಷಯಗಳನ್ನು ತನ್ನ ಯೂಟ್ಯೂಬ್ ಚಾನಲ್‍ನ ಮೂಲಕ ಚಿತ್ರಲೋಕ ಹಂಚಿಕೊಂಡಿದೆ. ಡಾ. ರಾಜಕುಮಾರ್ ಅವರ ಹತ್ತಿರದವರಿಂದ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ, ಕೆಲವರನ್ನು ನೇರವಾಗಿ ಸಂದರ್ಶನ ಮಾಡಿ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಚಿತ್ರಲೋಕ ತನ್ನ ಯೂಟ್ಯೂಬ್ ಚಾನಲ್‍ನಲ್ಲಿ ಇನ್ನಷ್ಟು ಎಕ್ಸ್‍ಕ್ಲೂಸಿವ್ ಆದ ಮಾಹಿತಿಯನ್ನು ತನ್ನ ವೀಕ್ಷಕರೊಂದಿಗೆ ಹಂಚಿಕೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದು, ಹಿರಿಯ ನಟ-ನಿರ್ಮಾಪಕ ದ್ವಾರಕೀಶ್, ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜ್, ಸಿ.ವಿ. ಶಿವಶಂಕರ್, ಸಾ.ರಾ. ಗೋವಿಂದು, ಟೆನ್ನಿಸ್ ಕೃಷ್ಣ ಸೇರಿದಂತೆ ಹಲವರು ನಡೆದುಬಂದ ಹಾದಿ ಸೇರಿದಂತೆ, ಅವರ ಜೀವನದ ಹಲವು ಮೈಲಿಗಲ್ಲುಗಳ ಕುರಿತು ಈ ಕಂತುಗಳು ಬೆಳಕು ಚೆಲ್ಲಲಿವೆ.

ಕನ್ನಡ ಚಿತ್ರರಂಗದ ಸುದ್ದಿಗಳು ಕೇವಲ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ಸಂದರ್ಭದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಅದನ್ನು ಜಗತ್ತಿನ ಮೂಲೆಮೂಲೆಗೂ ತಲುಪುವಂತೆ ಮಾಡಿದ್ದು ಚಿತ್ರಲೋಕ ಡಾಟ್‍ಕಾಮ್. ಯೂಟ್ಯೂಬ್‍ನ ಚಿತ್ರಲೋಕ ಚಾನಲ್ ಮೂಲಕ ಈ ಮಾಧ್ಯಮದಲ್ಲಿ ಇನ್ನಷ್ಟು ಕ್ರಾಂತಿ ಮಾಡುವುದಕ್ಕೆ ಚಿತ್ರಲೋಕ ಹೊರಟಿದ್ದು, ಈ ಪಯಣದಲ್ಲಿ ಜೊತೆಯಾದ ಓದುಗರು, ಚಂದಾದಾರರು, ಜಾಹೀರಾತುದಾರರು ಮತ್ತು ಹಿತೈಷಿಗಳಿಗೆ ಚಿತ್ರಲೋಕ ಧನ್ಯವಾದಗಳನ್ನು ಹೇಳಲು ಬಯಸುತ್ತದೆ.

– ಕೆ.ಎಂ. ವೀರೇಶ್ ಚಿತ್ರಲೋಕ ಡಾಟ್‍ಕಾಮ್

 

Be the first to comment

Leave a Reply

Your email address will not be published. Required fields are marked *

Translate »
error: Content is protected !!