ಮನಸು ಕದಿಯುವ `ಮಿಸ್ಸಿಂಗ್ ಬಾಯ್’
ಚಿತ್ರ: ಮಿಸ್ಸಿಂಗ್ ಬಾಯ್
ತಾರಾಗಣ: ಗುರುನಂದನ್, ಅರ್ಚನಾ ಜಯಕೃಷ್ಣನ್
ನಿರ್ದೇಶಕ: ರಘುರಾಮ್
ನಿರ್ಮಾಪಕ: ಕೊಲ್ಲ ಪ್ರವೀಣ್
ಜೋಗಿ ಚಿತ್ರ ನೋಡಿದವರು ಅದರಲ್ಲಿನ ರೌಡಿಸಂಗಿಂತ ಹೆಚ್ಚು ಮೆಚ್ಚುವುದು ತಾಯಿ ಮಗನ ನಡುವಿನ ಸೆಂಟಿಮೆಂಟ್ ಅನ್ನು. ಅಂಥದೇ ಭಾವನಾತ್ಮಕ ಕತೆಯನ್ನು ಇರಿಸಿಕೊಂಡು ಚಿತ್ರ ಮಾಡಿದ್ದಾರೆ ನಿರ್ದೇಶಕ ರಘುರಾಮ್. ಅಂದಹಾಗೆ ಜೋಗಿ ಚಿತ್ರದಲ್ಲಿ ರಘುರಾಮ್ ಕೂಡ ನಟಿಸಿದ್ದರು. ಇಲ್ಲಿ ಅವರು ನಟಿಸಿಲ್ಲ. ಆದರೆ ಜೋಗಿಯ ಹಾಡಿನ ಒಂದೆರಡು ಸಾಲುಗಳನ್ನು ಬಳಸಿಕೊಂಡಿದ್ದಾರೆ. ಆದರೆ ಅವುಗಳ ಅಗತ್ಯವಿಲ್ಲದೆಯೂ ಆಪ್ತವಾಗುವಂಥ ನಿರೂಪಣೆ ಚಿತ್ರಕ್ಕೆ ನೀಡಿದ್ದಾರೆ.
ನಿಶ್ಚಯ್ ಯುರೋಪ್ ನಲ್ಲಿರುವ ಜನಪ್ರಿಯ ಯುವ ಉದ್ಯಮಿ. ಆತ ಅಲ್ಲಿ ತನ್ನ ತಂದೆ ತಾಯಿಯೊಂದಿಗೆ ವಾಸವಾಗಿರುತ್ತಾನೆ. ಅಲ್ಲಿನ ಟಿವಿ ವಾಹಿನಿಯೊಂದರಲ್ಲಿ ಆತನ ಸಂದರ್ಶನ ನಡೆಸುತ್ತದೆ. ಸಂದರ್ಶನದ ನಡುವೆ ನಿಶ್ಚಯ್ ತನ್ನ ನಿಜವಾದ ತಾಯಿಯ ಬಗ್ಗೆ ನೆನಪಿಸಿಕೊಂಡು ಕಣ್ಣೀರಾಗುತ್ತಾನೆ. ಅಂದರೆ 25 ವರ್ಷಗಳ ಹಿಂದೆ ತನ್ನನ್ನು ಅನಾಥಾಲಯಕ್ಕೆ ನೀಡಿದಂಥ ಆ ತಾಯಿ ಯಾರು ಎಂದು ಅರಿಯದ ಚಿಂತೆಯ ಬಗ್ಗೆ ಹೇಳುತ್ತಾನೆ. ತಾಯಿಯ ಪತ್ತೆ ಯತ್ನಕ್ಕೆ ಅದೇ ವಾಹಿನಿಯ ವರದಿಗಾರ್ತಿ ನನಸು ಜೊತೆಯಾಗುತ್ತಾಳೆ. ತಾಯಿಯ ಹುಡುಕಾಟದ ಜರ್ನಿ ಹೇಗಿತ್ತು ಮತ್ತು ಕ್ಲೈಮ್ಯಾಕ್ಸ್ ನಲ್ಲಿ ತಾಯಿ ಮಗನ ಸಂಗಮ ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಆಕರ್ಷಣೆ.
ಬೆಂಗಳೂರಿನಿಂದ ಆರಂಭಗೊಳ್ಳುವ ಈ ಪ್ರಯತ್ನಕ್ಕೆ ಹುಬ್ಬಳ್ಳಿಯ ಟಚ್ ಇರುವುದನ್ನು ತೋರಿಸಲಾಗಿದೆ. ಹಾಗಾಗಿ ಪಲೀಸರ ಸಹಾಯದೊಂದಿಗೆ ಪಯಣ ಆರಂಭವಾಗುತ್ತದೆ. ಹುಡುಕಾಟದ ನೇತೃತ್ವ ವಹಿಸುವ ಲವಕುಮಾರ್ ಎನ್ನುವ ಎಸಿಪಿಯ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ವಿವಿಧ ಪ್ರಯತ್ನಗಳ ಮೂಲಕ ಪತ್ತೆಗೆ ಪ್ರಯತ್ನಿಸುವುದನ್ನು ವಿವರವಾಗಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ನಿಶ್ಚಯ್ ಗೆ ಹಲವು ಮಾದರಿಯ ತಾಯಂದಿರ ಪರಿಚಯವಾಗುತ್ತದೆ. ಒಂದೇ ದೃಶ್ಯದಲ್ಲಿ ಬಂದರೂ ನಟಿಯರಾದ ಸುಮಿತ್ರಾ ಬಾಬು ಮತ್ತು ರಾಧಾರಾಮಚಂದ್ರ ತಮ್ಮಲ್ಲಿನ ತಾಯ್ತನವನ್ನು ನಟನೆಯ ಮೂಲಕವೇ ಸಾರಿದ್ದಾರೆ. ಒಟ್ಟಿನಲ್ಲಿ ಒಳ್ಳೆಯ ಚಿತ್ರವೊಂದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಸಾಕು ತಂದೆ ತಾಯಿಯ ಪಾತ್ರದಲ್ಲಿ ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್, ಮಗನಾಗಿ ನಿಶ್ಚಯ್ ಪಾತ್ರಧಾರಿ ಗುರುನಂದನ್ ಸೇರಿದಂತೆ ಎಲ್ಲ ಪಾತ್ರಧಾರಿಗಳು ಸಹಜ ನಟನೆ ನೀಡಿದ್ದಾರೆ. ಯುರೋಪ್ ವಾಹಿನಿಯ ಪ್ರತಿನಿಧಿಯಾಗಿ ಸಾಥ್ ನೀಡುವ ನನಸು ಪಾತ್ರದಲ್ಲಿ ಅರ್ಚನಾ ನಟಿಸಿದ್ದಾರೆ. ಚಾಲಕನಾಗಿ ಕಾಣಿಸಿರುವ ರವಿಶಂಕರ್ ಮಾತಿನ ಕಲರವದಿಂದಲೇ ಚಿತ್ರಕ್ಕೆ ಹುರುಪು ನೀಡಿದ್ದಾರೆ. ಸಂಭಾಷಣೆಗಳು ಸಹಜವಾಗಿರುವುದು ಮತ್ತು ಯಾವುದೇ ದೃಶ್ಯಗಳನ್ನು ಎಳೆದಾಡದಂಥ ಸಂಕಲನ ಚಿತ್ರದ ಹೈಲೈಟ್. ತಾಯಿ ಮತ್ತು ಮಗನ ಭೇಟಿಯ ಕ್ಲೈಮ್ಯಾಕ್ಸ್ ಸನ್ನಿವೇಶ ಮತ್ತು ಅದರಲ್ಲಿ ತಾಯಿಯಾಗಿ ರಂಗಭೂಮಿ ನಟಿ ಭಾಗೀರಥಿ ಭಾಯಿಯವರ ನಟನೆ ಅದ್ಭುತವಾಗಿದೆ. ಸಿನಿಮಾ ನೋಡಿದವರು ತಮ್ಮ ತಾಯಂದಿರನ್ನು ನೆನಪಿಸಿಕೊಳ್ಳುವುದು ಖಚಿತ.
-Bheemaraya
Pingback: best codeless test automation tool