ಗಡಿಪಾರು ಭೀತಿ ಎದುರಿಸುತ್ತಿದ್ದ ನಟ ಚೇತನ್ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಚೇತನ್ ಕುಮಾರ್ ಅವರಿಗೆ ನೀಡಲಾಗಿದ್ದ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಮಾನ್ಯತೆ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ದೇಶ ವಿರೋಧಿ ಚಟುವಟಿಕೆಗಳಲ್ಲಿ ಚೇತನ್ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಒಸಿಐ ಮಾನ್ಯತೆಯನ್ನು ರದ್ದುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಚೇತನ್ ಕುಮಾರ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸಿ 2023ರ ಜೂನ್ 2ರವರೆಗೆ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.
ಚೇತನ್ ಅವರು ನ್ಯಾಯಾಂಗದ ಬಗ್ಗೆ ಯಾವುದೇ ಟ್ವೀಟ್ ಮಾಡುವಂತಿಲ್ಲ. ವಿಚಾರಣೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಹೇಳಿಕೆಗಳನ್ನು ನೀಡುವಂತಿಲ್ಲ. ಪ್ರಸ್ತುತ ಮಾಡಿರುವ ಟ್ವೀಟ್ಗಳನ್ನು ತೆಗೆದು, ಈ ಬಗ್ಗೆ ಮುಂದಿನ ನಾಲ್ಕು ದಿನಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಷರತ್ತುಗಳನ್ನು ಉಲ್ಲಂಘಿಸಿದರೆ ಮಧ್ಯಂತರ ತಡೆ ರದ್ದಾಗಲಿದೆ ಎಂದು ಪೀಠ ತಿಳಿಸಿದೆ.
2018ರಲ್ಲಿ ಕೇಂದ್ರ ಸರ್ಕಾರ ಚೇತನ್ ಅವರಿಗೆ ಒಸಿಐ ಕಾರ್ಡ್ ಮಂಜೂರು ಮಾಡಿತ್ತು. ಸಮುದಾಯಗಳ ವಿರುದ್ಧ ದ್ವೇಷ, ಸಾಮರಸ್ಯ ಕದಡುವಿಕೆ, ಕೊರೊನಾ ನಿಯಮಾವಳಿಗಳ ಉಲ್ಲಂಘನೆ, ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯದ ವಲಸೆ ವಿಭಾಗದ ಅಧಿಕಾರಿ, ನಿಮ್ಮ ಒಸಿಐ ಮಾನ್ಯತೆ ರದ್ದು ಮಾಡುವ ಬಗ್ಗೆ ಶೋಕಾಸ್ ನೋಟಿಸ್ ನೀಡಿತ್ತು. ನೋಟಿಸ್‌ಗೆ ನಟ ಚೇತನ್ ನೀಡಿದ ಉತ್ತರ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಅವರ ಕಾರ್ಡ್ ನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು.
ಇದನ್ನು ಪ್ರಶ್ನಿಸಿ ಚೇತನ್ ಕೋರ್ಟ್ ಮೊರೆ ಹೋಗಿದ್ದರು.
—–
Be the first to comment