ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿ ಕೊಟ್ಟ ಗುಜರಾತಿ ಚಿತ್ರ ಚೆಲ್ಲೋ ಶೋ ಸಿನಿಮಾದ ಬಗ್ಗೆ ವಿವಾದ ಸೃಷ್ಟಿಯಾಗಿದೆ.
ಈ ಸಿನಿಮಾ ಆಯ್ಕೆ ಮಾಡಿದ ಜ್ಯೂರಿಗಳ ವಿರುದ್ಧ ಅಸಮಾಧಾನದ ಹೊಗೆಯಾಡಿದೆ. ಚೆಲ್ಲೋ ಶೋ ಭಾರತದ ಚಿತ್ರವೇ ಅಲ್ಲ ಎಂದು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ ಆರೋಪ ಮಾಡಿದೆ.
ಈ ಬಗ್ಗೆ ಭಾರತದ ಫಿಲ್ಮ್ ಫೆಡರೇಷನ್ಗೆ ಪತ್ರ ಬರೆದು ಆಸ್ಕರ್ ಆಯ್ಕೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಮನವಿ ಮಾಡಲಾಗಿದೆ. ಪ್ಯಾನ್ ನಳಿನ್ ನಿರ್ದೇಶನದ ಚೆಲ್ಲೋ ಶೋ ವಿದೇಶಿ ಚಿತ್ರ. ಭಾರತದ ಸಿನಿಮಾವಲ್ಲ, 95 ನೇ ಅಕಾಡೆಮಿ ಅವಾರ್ಡ್‌ಗೆ ಭಾರತದಿಂದ ಪ್ರವೇಶ ಆಗಲು ಅರ್ಹವಲ್ಲ ಎಂದು ದೂರಿದೆ.
‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ ಅಧ್ಯಕ್ಷ ಬಿಎನ್ ತಿವಾರಿ ‘ಈ ಚಿತ್ರವು ಭಾರತೀಯ ಚಲನಚಿತ್ರವಲ್ಲ. ಆಯ್ಕೆ ಪ್ರಕ್ರಿಯೆಯೂ ಸರಿಯಾಗಿಲ್ಲ. RRR ಮತ್ತು ಕಾಶ್ಮೀರ ಫೈಲ್ಸ್‌ನಂತಹ ಹಲವಾರು ಭಾರತೀಯ ಚಲನಚಿತ್ರಗಳು ಇದ್ದವು. ಆದರೆ ಜ್ಯೂರಿ ಸಿದ್ಧಾರ್ಥ್ ರಾಯ್ ಖರೀದಿಸಿದ ವಿದೇಶಿ ಚಲನಚಿತ್ರವನ್ನು ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
‘ಈಗಿರುವ ಜ್ಯೂರಿಗಳನ್ನು ತೆಗೆದುಹಾಕಬೇಕು. ಈ ಜ್ಯೂರಿಗಳು ಹಲವು ವರ್ಷಗಳಿಂದ ಇದ್ದಾರೆ. ಇಲ್ಲಿರುವ ಅನೇಕರು ಚಿತ್ರವನ್ನೇ ನೋಡುವುದಿಲ್ಲ. ವೋಟಿಂಗ್ ಮೂಲಕ ಸಿನಿಮಾ ಆಯ್ಕೆ ಮಾಡುತ್ತಾರೆ. ಅತ್ಯಧಿಕ ಚಿತ್ರಗಳನ್ನು ರಿಲೀಸ್ ಮಾಡುವ ಭಾರತ ಚಿತ್ರರಂಗದ ಬಗ್ಗೆ ಚೆಲ್ಲೋ ಶೋ ಆಯ್ಕೆ ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತದೆ’ಎಂದು ತಿವಾರಿ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ.
ಚೆಲ್ಲೋ ಶೋ ಎಂದರೆ ‘ಕೊನೆಯ ಸಿನಿಮಾ ಶೋ’ ಎಂದರ್ಥ. ನಿರ್ದೇಶಕ ಪ್ಯಾನ್ ನಳಿನ್ ತಮ್ಮ ಬಾಲ್ಯದ ಅನುಭವಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ.
ಗುಜರಾತಿ ಭಾಷೆಯ ಚೆಲ್ಲೋ ಶೋ ಸಿನಿಮಾ 2023ನೇ ಅಕಾಡೆಮಿ ಅವಾರ್ಡ್‌ಗೆ ಅಧಿಕೃತವಾಗಿ ಆಯ್ಕೆಯಾಗಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಅನೇಕರು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಆಸ್ಕರ್‌ಗೆ ಆಯ್ಕೆಯಾಗಲಿ ಎಂದು ಅಭಿಯಾನ ಮಾಡಿದ್ದರು.
ಕೆಲವರು ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಆಯ್ಕೆ ಆಗಲಿ ಎಂದು ಅಭಿಯಾನ ಮಾಡಿದ್ದರು. ಈ ಎರಡು ಸಿನಿಮಾಗಳ ಚರ್ಚೆಯ ನಡುವೆ ಗುಜರಾತಿ ಸಿನಿಮಾ ಆಯ್ಕೆಯಾಗಿರುವುದು ಅಚ್ಚರಿ ಮೂಡಿಸಿತ್ತು.
___
Be the first to comment