ನಟ ಕಿಚ್ಚ ಸುದೀಪ್ ಹಾಗೂ ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ಧಾರಾವಾಹಿಯೊಂದರ ಚಿತ್ರೀಕರಣಕ್ಕಾಗಿ ಅಗ್ರಿಮೆಂಟ್ ಮಾಡಿಕೊಂಡು ಹಣ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿ ಕಾಫಿ ತೋಟದ ಮಾಲೀಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
‘ವಾರಸ್ದಾರ’ ಧಾರಾವಾಹಿಗಾಗಿ ನಮ್ಮ ಮನೆ ಹಾಗೂ ಕಾಫಿ ತೋಟದಲ್ಲಿ ಚಿತ್ರೀಕರಣ ಮಾಡಲು 2 ವರ್ಷಗಳ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಚಿತ್ರೀಕರಣ ಶುರು ಮಾಡಿದ ಕೆಲ ದಿನಗಳಲ್ಲಿ ಸ್ಥಗಿತಗೊಂಡಿತ್ತು. ಚಿತ್ರೀಕರಣಕ್ಕಾಗಿ ಕಾಫಿ ತೋಟ, ಮರಗಳನ್ನು ನಾಶ ಮಾಡಿದ್ದಾರೆ ಎಂದು ಕಾಫಿ ತೋಟದ ಮಾಲೀಕ ದೀಪಕ್ ಮಯೂರ್ ಪಟೇಲ್ ಆರೋಪಿಸಿ ದೂರು ನೀಡಿದ್ದಾರೆ.
ಅಗ್ರಿಮೆಂಟ್ ಪ್ರಕಾರ 95 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ್ ವಿರುದ್ಧ ಈ ಹಿಂದೆ ದೂರು ದಾಖಲಿಸಿದ್ದೆ. 60 ಲಕ್ಷ ರೂಪಾಯಿ ಹಣ ನೀಡುವುದಾಗಿ ಸುದೀಪ್ ಅವರು ಭರವಸೆ ನೀಡಿದ್ದರಿಂದ ದೂರು ಹಿಂಪಡೆದಿದ್ದೆ. 10 ಲಕ್ಷ ರೂಪಾಯಿ ಚೆಕ್ ನೀಡಿದ್ದು ಇನ್ನುಳಿದ ಹಣ ನೀಡದೇ ವಂಚಿಸಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ.
2016ರಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಒಟ್ಟು 4 ತಿಂಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ತಂಡದವರು ನೋಟ್ ಬ್ಯಾನ್ ಆದ ಕಾರಣ ಚಿತ್ರೀಕರಣ ನಿಲ್ಲಿಸಿ ಬೆಂಗಳೂರಿಗೆ ತೆರಳಿದ್ದರು. ದಿನಕ್ಕೆ 6 ಸಾವಿರ ರೂಪಾಯಿ ಬಾಡಿಗೆ ಎಂದು ಮಾತುಕತೆ ನಡೆದಿತ್ತು. ಚಿತ್ರೀಕರಣದ 80,000 ರೂ. ಬಾಕಿ ಉಳಿಸಿಕೊಂಡಿದ್ದರು. ಮರಗಳನ್ನು ಕಡಿದು ಶೆಡ್ ನಿರ್ಮಾಣ ಮಾಡಲಾಗಿತ್ತು. ತೋಟದ ಜಾಗವನ್ನು ಸರಿಪಡಿಸದೆ ಹಾಗೆ ಬಿಟ್ಟು ಹೋಗಿರುತ್ತಾರೆ ಎಂದು ಮಾಲೀಕರು ದೂರಿದ್ದಾರೆ.
—–





Be the first to comment