ಕನ್ನಡದ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಗೆ ಎಮ್ಮೆ ಕೊಡುವುದಾಗಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರೇಮ್ ಗೆ ಹೈನುಗಾರಿಕೆಗಾಗಿ ಎಮ್ಮೆಗಳನ್ನು ಖರೀದಿಸಲು ನೀಡಿದ 4.50 ಲಕ್ಷ ₹ಮೊತ್ತ ವಾಪಸ್ ಸಿಗದೆ ಮೋಸವಾಗಿದೆ. ಪ್ರೇಮ್ ಮ್ಯಾನೇಜರ್ ದಶಾವರ ಚಂದ್ರು ನೀಡಿದ ದೂರಿನ ಆಧಾರದ ಮೇಲೆ ಗುಜರಾತ್ ಮೂಲದ ವಘೇಲಾ ವನರಾಜ್ ಭಾಯ್ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜುಲೈನಲ್ಲಿ ಪ್ರೇಮ್ ಅವರು ಎಮ್ಮೆ ಖರೀದಿಸಲು ಮುಂಗಡವಾಗಿ ವಘೇಲಾ ವನರಾಜ್ ಭಾಯ್ ಗೆ 25,000 ₹ ವರ್ಗಾಯಿಸಿದ್ದರು. ಬಳಿಕ ಹಂತ ಹಂತವಾಗಿ ಒಟ್ಟು 4.50 ಲಕ್ಷ ₹ ಮೊತ್ತವನ್ನು ವನರಾಜ್ ಭಾಯ್ ಖಾತೆಗೆ ಹಾಕಲಾಗಿತ್ತು. ಆರೋಪಿ ವಾಟ್ಸಾಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳುಹಿಸಿ ಕಳುಹಿಸುತ್ತೇನೆಂದು ಭರವಸೆ ನೀಡಿದರೂ ಎಮ್ಮೆಗಳನ್ನು ತಂದು ಕೊಡಲಿಲ್ಲ.
ಹಣ ವಾಪಸ್ ನೀಡುವಂತೆ ಒತ್ತಾಯಿಸಿದರೂ ಹಣ ಮರಳಿಸದೆ ಮೊಬೈಲ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ವನರಾಜ್ ಭಾಯ್ ನೀಡಿದ್ದ ವಿಳಾಸಕ್ಕೆ ಪ್ರೇಮ್ ಪರಿಚಿತರನ್ನು ಕಳುಹಿಸಿದಾಗ ಆ ವಿಳಾಸದಲ್ಲಿ ವನರಾಜ್ ಭಾಯ್ ವಾಸಿಸದಿರುವುದು ತಿಳಿದು ಬಂದಿದೆ.
ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
—-





Be the first to comment