ಲೈಂಗಿಕವಾಗಿ ಬಳಸಿ ಪರಾರಿಯಾದ ನಟ!

ಸಿನಿಮಾ ಚಾನ್ಸ್ ಕೊಡಿಸೋದಾಗಿ ನಂಬಿಸಿ ಯುವತಿಗೆ ಕೈಕೊಟ್ಟು ಪರಾರಿಯಾದ ನಟನ ವಿರುದ್ಧ  ಜ್ಞಾನಭಾರತಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಿನಿಮಾ ಚಾನ್ಸ್ ಕೊಡಿಸ್ತೀನಿ ಎಂದು ನಂಬಿಸಿದ್ದ ನಟ ಸಂತೋಷ್, ಖಾಸಗಿ ವಿಡಿಯೊ ಚಿತ್ರೀಕರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.

ಕನ್ನಡ, ತಮಿಳಿನಲ್ಲಿ‌ ಸಣ್ಣಪುಟ್ಟ ಪಾತ್ರ ಮಾಡಿರುವ ಸಂತೋಷ್, ಯುವತಿಯನ್ನು ಆಕೆಯ ಸ್ನೇಹಿತೆ ಮೂಲಕ ಪರಿಚಯ ಮಾಡಿಕೊಂಡಿದ್ದ. ಬಳಿಕ ಸಿನಿಮಾದಲ್ಲಿ ಅವಕಾಶ ಕೊಡಿಸ್ತೀನಿ ಎಂದು ಹಲವೆಡೆ ಸುತ್ತಾಡಿಸಿದ್ದ. ಪೀತಿ, ಮದುವೆ ಎಂದು ನಾಟಕವಾಡಿ ಸಂತೋಷ್ ಹಲವೆಡೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ.  ಖಾಸಗಿ ಫೋಟೊ, ವಿಡಿಯೊಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಟ್ಟುಕೊಂಡಿದ್ದಾನೆ. ಸಾಲದಕ್ಕೆ ಮತ್ತೊಂದು‌ ವಿವಾಹವಾಗಿದ್ದಾನೆ. ಆತನ ಮನೆ ಬಳಿ ಹೋಗಿ ಯುವತಿ ಪ್ರಶ್ನೆ ಮಾಡಿದ್ದಕ್ಕೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಸಂತ್ರಸ್ತ ಯುವತಿ 6 ತಿಂಗಳ ಹಿಂದೆ ನಟನ ವಿರುದ್ಧ ದೂರು ನೀಡಿದ್ದಳು. ಆದರೆ ಕೃತ್ಯ‌ ನಡೆದ‌ ಸ್ಥಳದ ಆಧಾರದಲ್ಲಿ ಅತ್ತಿಬೆಲೆ ಠಾಣೆಗೆ ಪ್ರಕರಣ ವರ್ಗಾವಣೆ ಆಗಿತ್ತು. ಈ  ಸಂಬಂಧ ಪೊಲೀಸರು ನಟನ ವಿರುದ್ಧ ಯಾವುದೇ ಕ್ರಮ‌ ಕೈಗೊಂಡಿರಲಿಲ್ಲ.  ಮತ್ತೆ ಹಲ್ಲೆ ಮಾಡಿರುವ ಕಾರಣ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆಬ್ರವರಿ 14ರಂದು ಯುವತಿ ಮನೆ ಬಳಿ ಬಂದಿದ್ದ ಸಂತೋಷ್ ಯುವತಿಯ ಖಾಸಗಿ ಫೋಟೊ, ವಿಡಿಯೋ ಇಟ್ಟುಕೊಂಡು ಕರೆದಾಗ ಬರಬೇಕು. ಇಲ್ಲದಿದ್ದರೆ ವಿಡಿಯೊ ಲೀಕ್‌ ಮಾಡುತ್ತೇನೆ ಎಂದು ಬೆದರಿಕೆ  ಹಾಕಿರುವುದಾಗಿ ಯುವತಿ ಹೇಳಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!