ನಂದ ಕಿಶೋರ್ ವಿರುದ್ಧ ವಂಚನೆ ಆರೋಪ

ನಿರ್ದೇಶಕ ನಂದ ಕಿಶೋರ್ ವಿರುದ್ಧ ಯುವ ನಟರೊಬ್ಬರು ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಂದ ಕಿಶೋರ್  ತಮ್ಮಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು, ಈಗ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಸುದೀಪ್ ಅವರ ಹೆಸರು ಬಳಸಿ ನನಗೆ ಬೆದರಿಕೆ ಹಾಕಿದ್ದಾರೆ ಎಂದು  ನಟ ಶಬರೀಶ್ ಆರೋಪ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿರುವ ಶಬರೀಶ್ ಶೆಟ್ಟಿ,  ನಂದ ಕಿಶೋರ್ ಸುಮಾರು ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ಪರಿಚಯವಾದರಂತೆ.  ನಂದ ಕಿಶೋರ್, ಶರಬೀಶ್ ಅವರನ್ನು ಸಿಸಿಎಲ್​​ನಲ್ಲಿ ಆಡಿಸುವುದಾಗಿ ಭರವಸೆ ನೀಡಿ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ಆದರೆ ಈವರೆಗೆ ನಂದ ಕಿಶೋರ್  ಹಣ ಮರಳಿಸಿಲ್ಲ ಎಂದು ಶಬರೀಶ್ ಆರೋಪಿಸಿದ್ದಾರೆ.

ಹಣ ಮರಳಿಸುವಂತೆ ಕೇಳಿದರೆ ಬೆದರಿಕೆ ಹಾಕುತ್ತಾರೆ. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರು ಹೇಳಿ ಯಾಮಾರಿಸಿದರು. ಸಿನಿಮಾದಲ್ಲಿ ಅವಕಾಶ ಕೊಡ್ತಿನಿ ಅಂತ ಹೇಳಿ  ಮೋಸ ಮಾಡಿದ್ದಾರೆ. ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ಕೆಸಿಸಿಯಿಂದ ಹೊರ ಹಾಕ್ತಿನಿ ಅಂತ ಬೆದರಿಕೆ ಹಾಕುತ್ತಿದ್ದರು.  ಫಿಲಂ ಚೇಂಬರ್​​ಗೆ ಈ ಬಗ್ಗೆ ದೂರು ನೀಡುವುದಾಗಿ  ಶಬರೀಶ್ ಹೇಳಿದ್ದಾರೆ.

ನಾನು 200 ಗ್ರಾಂ ಚಿನ್ನ ಅಡವಿಟ್ಟು ಅವರಿಗೆ ಹಣ ಕೊಟ್ಟಿದ್ದೆ. ಆ ಚಿನ್ನದ ಲೋನ್ ಕಟ್ಟಿ ಎಂದೆ. ಅದನ್ನು ಕಟ್ಟಲಿಲ್ಲ. ನಾನು ಬಡ್ಡಿ ಕಟ್ಟಿದೆ. ಬಡ್ಡಿಯ ಮೇಲೆ ಬಡ್ಡಿ ಬೆಳೆದು ಆ ಚಿನ್ನವನ್ನು ಹರಾಜು ಹಾಕಲಾಯ್ತು. ನನ್ನ ಬಳಿ ದಾಖಲೆ ಇದೆ. ‘ಪೊಗರು’ ಸಿನಿಮಾನಲ್ಲಿ ಅವಕಾಶ ಕೊಡ್ತೀನಿ ಅಂದ್ರು. ಕೊಡಲಿಲ್ಲ. ‘ರಾಣಾ’ ಸಿನಿಮಾದಲ್ಲಿ ಅವಕಾಶ ಕೊಡ್ತೀನಿ ಅಂದ್ರು. ಕೊಡಲಿಲ್ಲ. ಈಗ ಹಣ ಕೇಳಿದರೆ ಏನು ಮಾಡ್ಕೊತೀಯೋ ಮಾಡ್ಕೊ ಎಂದು ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗ್ತಿದ್ದೆ. ಈಗ ನಾನು ‘ರಾಮಧೂತ’ ಸಿನಿಮಾ ಮಾಡಿದ್ದೇನೆ, ಶೂಟಿಂಗ್ ಪೂರ್ತಿ ಆಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ಹಣ ವಾಪಸ್ ಕೊಡಿ ಅಂತ ಕೇಳಿದರೆ ಏನು ಮಾಡ್ಕೊತೀಯಾ ಮಾಡ್ಕೊ ಅಂದಿದ್ದಾರೆ. ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕೊದು ಗೊತ್ತಾಗ್ತಿಲ್ಲ?  ನಾನು ಈ ವಿಚಾರವನ್ನು ಸುದೀಪ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ‌ನನ್ನ ತಡೆಯಲಾಯ್ತು. ನನ್ನ ಹಣ ಕೊಡದೇ ಇದ್ದರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗುತ್ತೀನಿ. ಈ ವಿಷಯವನ್ನು ಶಿವಣ್ಣ, ಸುದೀಪ್  ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!