CHAYA Movie : ಛಾಯಾ ಚಿತ್ರದಲ್ಲಿ ಹಾರರ್ ನೆರಳು !

ನ್ಯೂ ಗ್ಲೋಬಲ್ ಕ್ರಿಯೇಶನ್ಸ್ ಅಡಿಯಲ್ಲಿ ಶ್ರೀಮತಿ ನಂದ ಎಂ.ಆರ್. ಅವರು ನಿರ್ಮಿಸಿರುವ ಹಾರರ್ ಹಿನ್ನೆಲೆಯ ಚಿತ್ರ ಛಾಯ ತೆರೆಗೆ ಬರಲು ರೆಡಿಯಾಗಿದೆ. ನಾಲ್ಕು ಜನ ಯುವಕರು ಒಂದು ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿ ಅನೇಕ ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಆ ಎಲ್ಲಾ ಅನಾಹುತಗಳಿಗೆ ಕಾರಣವೇನು ಎನ್ನುವುದೇ ಛಾಯ ಚಿತ್ರದ ಪ್ರಮುಖ ಕಥಾವಸ್ತು. ನೃತ್ಯನಿರ್ದೇಶಕ ಜಗ್ಗು ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಮಾರಕಾಸ್ತ್ರ ಖ್ಯಾತಿಯ ಆನಂದ್ ಆರ್ಯ, ತೇಜುರಾಜ್ ಹಾಗೂ ಅನನ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಸೋಮವಾರ ನಡೆಯಿತು. ನಾಲ್ವರು ಸ್ನೇಹಿತರ ಸುತ್ತ ನಡೆಯುವ ಘಟನೆಗಳನ್ನೊಳಗೊಂಡ ಕಥೆಯನ್ನು ಹಾರರ್ ಹಿನ್ನೆಲೆ ಇಟ್ಟುಕೊಂಡು ನಿರ್ದೇಶಕ ಜಗ್ಗು ನಿರೂಪಿಸಿದ್ದಾರೆ. ಚಿತ್ರರಂಗದಲ್ಲಿ ಕಳೆದ ಎರಡು ದಶಕಗಳಿಗೂ ಹೆಚ್ಚುಕಾಲ ೧೫೦-೨೦೦ ಚಿತ್ರಗಳಿಗೆ ಕೊರಿಯೋಗ್ರಾಫರ್ ಆಗಿದ್ದ ಜಗ್ಗು ಮೊದಲಬಾರಿಗೆ ಆಕ್ಷನ್ ಖಟ್ ಹೇಳಿರುವ ಈ ಚಿತ್ರದ ಹಾಡುಗಳಿಗೆ ಮಂಜು ಕವಿ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿರಿಮ್ಯೂಜಿಕ್ ಆಡಿಯೋ ಈ ಚಿತ್ರದ ಹಾಡುಗಳನ್ನು ಹೊರತಂದಿದೆ.

ಛಾಯ ಹಾರರ್ ಛಾಯೆ ಇರುವ ಸಿನಿಮಾ, ಆದರೆ ಹಾರರ್ ಚಿತ್ರ ಅಲ್ಲ ಎಂದು ಸಿನಿಮಾದ ಜಾನರ್ ಕುರಿತಂತೆ ಸ್ಪಷ್ಟನೆ ನೀಡಿದ ಜಗ್ಗು ನಮ್ಮ ಚಿತ್ರ ಕಳೆದ ಮೂರು ವರ್ಷಗಳ ಹಿಂದಯೇ ರೆಡಿಯಾಗಿತ್ತು, ಕಾರಣಾಂತರಗಳಿಂದ ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ, ಬರುವ ಜನವರಿ ವೇಳೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ, ಎಂಜಿನಿಯರಿಂಗ್ ಮಾಸಿಕೊಂಡಿದ್ದ ನಾಲ್ವರು ಸ್ನೇಹಿತರಲ್ಲಿ ಒಬ್ಬನಿಗೆ ಮದುವೆಯಾಗಿ ಆ ದಂಪತಿಗಳು ಮನೆಗೆ ಬಂದಮೇಲೆ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತವೆ. ಅದಕ್ಕೆ ಕಾರಣವೇನು ಎನ್ನುವುದೇ ಚಿತ್ರದ ತಿರುಳು. ಚಿತ್ರಕ್ಕೆ ಯು/ಎ ಸೆನ್ಸಾರ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಮರಿಸ್ವಾಮಿ ಅವರು ರಿಲೀಸ್ ಮಾಡುತ್ತಿದ್ದಾರೆ ಎಂದು ಹೇಳಿದರು,

ನಾಯಕ ಆನಂದ್ ಆರ್ಯ ಮಾತನಾಡಿ ಒಂದು ಸಿನಿಮಾ ಮಾಡೋದು ಎಷ್ಟು ಕಷ್ಟದ ಕೆಲಸ ಅಂತ ನನಗೆ ಈ ಚಿತ್ರದಿಂದ ಗೊತ್ತಾಯ್ತು. ಅತ್ಯಾಚಾರ ಇಂದಿನ ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು. ಅತ್ಯಾಚಾರ ಮಾಡಿದವರನ್ನು ಹೇಗೆಲ್ಲಾ ಶಿಕ್ಷಿಸಬಹುದು ಎನ್ನುವ ಕಥೆ ಚಿತ್ರದಲ್ಲಿದೆ. ಇಲ್ಲಿ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್, 4 ಜನರಲ್ಲಿ ನಾನೂ ಒಬ್ಬ. ಹಣ ಇರುವವರು ಏನೇನೆಲ್ಲ ಚಟಗಳನ್ನು ಕಲಿಯುತ್ತಾರೆ. ಅವರನ್ನು ಒಳ್ಳೇ ದಾರಿಗೆ ತರಲು ನಾನು ಹೇಗೆ ಪ್ರಯತ್ನಿಸುತ್ತೇನೆ, ಫ್ರೆಂಡ್ಸ್ ಮಧ್ಯೆ ಏನೇನೆಲ್ಲ ನಡೆಯುತ್ತದೆಂದು ಚಿತ್ರದಲ್ಲಿ ಹೇಳಲಾಗಿದೆ ಎಂದರು.

ನಿರ್ಮಾಪಕಿ ಶ್ರೀಮತಿ ನಂದಾ ಮಾತನಾಡುತ್ತ ನಮ್ಮ ಸಂಸ್ಥೆಯ ನಿರ್ಮಾಣದ ಮೊದಲ ಚಿತ್ರವಿದು. ನಿರ್ದೇಶಕರು ಈ ಕಥೆ ಹೇಳಿದಾಗ ಚೆನ್ನಾಗಿದೆ ಅನಿಸಿತು. ಸಿನಿಮಾ ನಿಜಕ್ಕೂ ತುಂಬಾ ಚೆನ್ನಾಗಿ ಬಂದಿದೆ. ನನಗೆ ಒಬ್ಬ ನಟಿಯಾಗಬೇಕು ಎಂಬ ಆಸೆ ಇತ್ತು. ಚಿತ್ರದಲ್ಲಿ ನಿಮಗೆ ತಕ್ಕ ಪಾತ್ರವಿಲ್ಲ ಎಂದು ಹೇಳಿದರು, ಹಾಗಾಗಿ ನಿರ್ಮಾಪಕಿಯಾಗಿ ಮಾತ್ರ ಕೆಲಸ ಮಾಡಿದ್ದೇನೆ.

ಸಸ್ಪೆನ್ಸ್ ಹಾರರ್ ಎರಡೂ ಚಿತ್ರದಲ್ಲಿದೆ. ಈಗಿನ ಜನರೇಶನ್ ಹುಡುಗರನ್ನು ಫ್ಯಾಮಿಲಿಯಿಳಗೆ ಇಟ್ಟುಕೊಂಡರೆ ಏನೇನಾಗುತ್ತದೆ ಅಂತ ಚಿತ್ರದಲ್ಲಿ ಹೇಳಲಾಗಿದೆ ಎಂದು ಹೇಳಿದರು, ನಾಯಕಿ ತೇಜುರಾಜ್ ಮಾತನಾಡಿ ಚಿತ್ರದಲ್ಲಿ ನಾನೊಬ್ಬ ಹಳ್ಳಿ ಹುಡುಗಯಾಗಿದ್ದು, ನಂತರ ನಾಯಕನ ಹೆಂಡತಿಯ ಪಾತ್ರ ಮಾಡಿದ್ದೇನೆ. ಕಿರಿತೆರೆಯ ಒಂದೆರಡು ಸೀರಿಯಲ್‌ಗಳಲ್ಲಿ ನಟಿಸಿದ ನನ್ನ ಮೊದಲ ಚಿತ್ರವಿದು ಎಂದರು.
ಸಂಗೀತ ನಿರ್ದೇಶಕ ಮಂಜುಕವಿ ಮಾತನಾಡಿ ಚಿತ್ರದಲ್ಲಿ 4 ಹಾಡುಗಳಿದ್ದು, ನಾನೇ ಸಾಹಿತ್ಯರಚಿಸಿ ಕಂಪೋಜ್ ಮಾಡಿದ್ದೇನೆ, ಮತ್ತಲ್ಲಿ ಎಂಬ ಹಾಡಿನ ಲಿರಿಕಲ್ ವಿಡಿಯೋ ಉತ್ತರ ಕರ್ನಾಟಕದಾದ್ಯಂತ ತುಂಬಾ ಜನಪ್ರಿಯವಾಗಿದೆ ಎಂದು ಹೇಳಿದರು, ನಂತರ ಸಿರಿ ಮ್ಯೂಸಿಕ್‌ನ ಚಿಕ್ಕಣ್ಣ ಮಾತನಾಡಿ ಈ ಚಿತ್ರದ ಹೆಸರಿನಲ್ಲೇ ಒಂದು ಕುತೂಹಲವಿದೆ. ಮತ್ತಲ್ಲಿ ಹಾಡಿನ ಲಿರಿಕಲ್ ವಿಡಿಯೋ 30 ಮಿಲಿಯನ್ ದಾಟಿ ವೀಕ್ಷಣೆಯಾಗಿದೆ ಎಂದರು. ನಂತರ ಮತ್ತೊಬ್ಬ ಅತಿಥಿ ರಾಜ್‌ಪ್ರಭು ಮಾತನಾಡುತ್ತ ಚಿತ್ರದಲ್ಲಿ ನಾನು ಒಬ್ಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ವೀನಸ್ ನಾಗರಾಜ ಮೂರ್ತಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದು, ಮಗನ ಪರವಾಗಿ ಬಂದಿದ್ದ ವೀನಸ್ ಮೂರ್ತಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಅನನ್ಯ, ರಾಜಶೇಖರ್, ನಯನಕೃಷ್ಣ, ಹೇಮಂತ್, ದರ್ಶನ್, ನಂದನ, ರಾಜ್ ಉದಯ್, ಕಿಲ್ಲರ್ ವೆಂಕಟೇಶ್ ಮುಂತಾದವರು ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!