ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಸಂಬಂಧ ಕಿಚ್ಚ ಸುದೀಪ್ ಕೆಲ ಅಭಿಮಾನಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ನ್ಯಾಯಾಲಯಕ್ಕೆ ವಿಸ್ತೃತ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಹಲವು ಶಾಕಿಂಗ್ ಮಾಹಿತಿ ಹೊರಬಿದ್ದಿವೆ.
ಪೊಲೀಸರು 45ನೇ ಎಸಿಎಂಎಂ ನ್ಯಾಯಾಲಯಕ್ಕೆ 6 ಆರೋಪಿಗಳ ವಿರುದ್ಧ ಸುಮಾರು 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಆರು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಬಂಧಿತರಲ್ಲಿ ಕೆಲವರು ಕಿಚ್ಚ ಸುದೀಪ್ ಅಭಿಮಾನಿಗಳಾಗಿದ್ದಾರೆ.
ಬಂಧಿತರು ವಿಜಯಲಕ್ಷ್ಮಿಯನ್ನು ಟಾರ್ಗೆಟ್ ಮಾಡಿ ಅಸಭ್ಯ ರೀತಿಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿ ಕಾಮೆಂಟ್ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ. ತಾವು ಹಾಕಿದ ಪೋಸ್ಟ್‌ಗಳು ಅಶ್ಲೀಲವಾಗಿವೆ ಎಂಬುದು ಗೊತ್ತಿದ್ದರೂ ಕಾಮೆಂಟ್ ಮಾಡಿದ್ದಾಗಿ ಆರೋಪಿಗಳು ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಪೊಲೀಸರು ಪ್ರಕರಣದಲ್ಲಿ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಇನ್ನಷ್ಟೇ ಬರಬೇಕಿದೆ. ಡೇಟಾ ರಿಟ್ರೀವ್ ಪ್ರಕ್ರಿಯೆ ನಡೆಯುತ್ತಿದೆ.
ಕಾಮೆಂಟ್ ಮಾಡಿದ್ದ 12 ಸಾಮಾಜಿಕ ಜಾಲತಾಣ ಐಡಿಗಳ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಸಂಬಂಧಿತ ಕಂಪನಿಗಳಿಗೆ ಪೊಲೀಸರು ಪತ್ರ ಬರೆದು ಮಾಹಿತಿ ಕೇಳಿದ್ದು ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 24ಕ್ಕೆ ಮುಂದೂಡಿದೆ. ಪ್ರಕರಣದಲ್ಲಿ ಬಂಧಿತರಾದ ಆರು ಮಂದಿ ಈಗಾಗಲೇ 2 ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ.
ತಮ್ಮ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ವಿಜಯಲಕ್ಷ್ಮಿ ಆರೋಪಿಸಿದ ಬಳಿಕ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದರು.
_





Be the first to comment