ವಿಕ್ರಾಂತ್ ರೋಣ ಸಿನೆಮಾ ಖ್ಯಾತಿಯ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ರೂ. 215 ಕೋಟಿ ಸುಲಿಗೆ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್ಶೀಟ್ನಲ್ಲಿ ಜಾಕ್ವೆಲಿನ್ ಹೆಸರನ್ನು ಸೇರಿಸಲಾಗಿದ್ದು ನಟಿ ಸಮಸ್ಯೆಗೆ ಸಿಲುಕಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಈಗಾಗಲೇ ಕಂಬಿ ಎಣಿಸುತ್ತಿದ್ದಾನೆ.
ತಾನು ಪ್ರಧಾನಿ ಕಚೇರಿಯ ಅಧಿಕಾರಿ ಎಂದು ನಂಬಿಸಿ ಜೈಲಿನಲ್ಲಿದ್ದ ಉದ್ಯಮಿ ಶಿವಿಂದರ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ ಸುಮಾರು 200 ಕೋಟಿ ರೂಪಾಯಿಗಳನ್ನು ಸುಕೇಶ್ ಸುಲಿಗೆ ಮಾಡಿದ್ದ.
ಅಕ್ರಮ ಹಣ ವ್ಯವಹಾರ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಸುಕೇಶ್ ಐಷಾರಾಮಿ ಸವಲತ್ತು ಪಡೆಯಲು, ಮಹಿಳಾ ಅತಿಥಿಗಳನ್ನು ಭೇಟಿಯಾಗಲು ತಿಹಾರ ಜೈಲಿನ ಸಿಬ್ಬಂದಿಗೆ ಪ್ರತೀ ತಿಂಗಳು 1 ಕೋಟಿ ರೂಪಾಯಿ ಲಂಚವಾಗಿ ನೀಡುತ್ತಿದ್ದ ಎಂದು ಜಾರಿ ನಿರ್ದೇಶನಾಲಯದ ಮೂಲ ಈ ಹಿಂದೆ ತಿಳಿಸಿತ್ತು.
ಜೈಲಿನಲ್ಲಿದ ಸುಕೇಶ್ ಕಚೇರಿಗೆ ಸುಕೇಶ್ ಪತ್ನಿ ಲೀನಾ ಮಾರಿಯಾ ಪಾಲ್ ಬೇಕೆಂದಾಗಲೆಲ್ಲಾ ಬಂದು ಹೋಗುತ್ತಿದ್ದರು. ಸುಕೇಶ್ ಹಲವು ಪಾರ್ಟಿಗಳನ್ನು ಏರ್ಪಡಿಸಿದ್ದ. ಈ ಪಾರ್ಟಿಗಳಿಗೆ ಜಾಕ್ವೆಲಿನ್ ಫರ್ನಾಂಡಿಸ್, ನೋರಾ ಅಲ್ಲದೆ ಬಾಲಿವುಡ್ ನಟಿಯರು ಮತ್ತು ಮಾಡೆಲ್ಗಳು ಬಂದು ಹೋಗಿದ್ದಾರೆ ಎಂದು ಹೇಳಲಾಗಿದೆ.
ವಂಚಕ ಸುಕೇಶ್ ಚಂದ್ರಶೇಖರ್ ಸ್ನೇಹ ಮಾಡಿದ ತಪ್ಪಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈಗ ಕೋರ್ಟ್ ಕಟಕಟೆಯಲ್ಲಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ. ಜಾಕ್ವೆಲಿನ್ ಫರ್ನಾಂಡೀಸ್ಗೆ ಸುಕೇಶ್ ಚಂದ್ರಶೇಖರ್ ವಂಚನೆ ಮಾಡಿ ಹಣ ಗಳಿಸಿದ್ದಾನೆ ಎನ್ನುವುದು ಗೊತ್ತಿತ್ತು ಎಂದು ಇ.ಡಿ. ಹೇಳಿದೆ. ಈ ಕಾರಣಕ್ಕೆ ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ನ್ನು ಆರೋಪಿಯನ್ನಾಗಿ ಮಾಡಲು ಇ.ಡಿ. ನಿರ್ಧರಿಸಿದೆ.
ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಫರ್ನಾಂಡೀಸ್ಗೆ ಲಕ್ಸುರಿ ಬಿಎಂಡಬ್ಲ್ಯು ಕಾರ್ ನ್ನು ಗಿಫ್ಟ್ ಆಗಿ ನೀಡಿದ್ದ. ಡೈಮೆಂಡ್ ಬ್ರಾಸಲೆಟ್, ಫ್ರಾಂಕ್ ಮುಲ್ಲರ್ ಲಕ್ಸುರಿ ವಾಚ್, ದುಬಾರಿ ಬೆಲೆಬಾಳುವ ಗುಸ್ಸಿ, ಚಾನಲ್ಬ್ಯಾಗ್ಗಳನ್ನು ಗಿಫ್ಟ್ಗಳನ್ನು ನೀಡಿದ್ದ. ಜೊತೆಗೆ ಕುದುರೆಯೊಂದನ್ನು ಗಿಫ್ಟ್ ಆಗಿ ನೀಡಿದ್ದ ಎಂದು ತಿಳಿದು ಬಂದಿದೆ.
ಕೆಲ ತಿಂಗಳ ಹಿಂದೆ ಜಾಕ್ವೆಲಿನ್ ಫರ್ನಾಂಡೀಸ್ಗೆ ಸುಕೇಶ್ ಚಂದ್ರಶೇಖರ್ ಮುತ್ತು ಕೊಡುತ್ತಿರುವ ಪೋಟೋಗಳು ಲೀಕ್ ಆಗಿದ್ದವು. ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್ವೆಲಿನ್ ಫರ್ನಾಂಡೀಸ್ಗೂ ನೋಟೀಸ್ ನೀಡಿ ವಿಚಾರಣೆಗೆ ಕರೆದು ವಿಚಾರಣೆ ನಡೆಸಿದ್ದರು.
ಇ.ಡಿ. ವಿಚಾರಣೆ ವೇಳೆ ಜಾಕ್ವೆಲಿನ್ ಫರ್ನಾಂಡೀಸ್, ಸುಕೇಶ್ ಚಂದ್ರಶೇಖರ್ ವಂಚನೆಗೂ ತನಗೂ ಸಂಬಂಧವಿಲ್ಲ. ಈತನಿಗೆ ವಂಚನೆಯ ಹಿನ್ನೆಲೆ ಇದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಳು.
ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಫರ್ನಾಂಡೀಸ್ಗೆ ಮಾತ್ರವಲ್ಲದೇ, ಸಾರಾ ಅಲಿಖಾನ್, ಜಾಹ್ನವಿ ಕಪೂರ್ ಗೂ ಗಿಫ್ಟ್ ಗಳನ್ನು ನೀಡಿದ್ದಾನೆ ಎನ್ನಲಾಗಿದೆ.
__
Be the first to comment