ಚಂದ್ರು ಓಬಯ್ಯ ಹೊಸ ಚಿತ್ರ ‘ವೈಭೋಗ’

ಯೂ ಟರ್ನ್-2, ರಾಮು ಅಂಡ್ ರಾಮು ಹಾಗೂ ಕರಿಮಣಿ ಮಾಲೀಕ ಚಿತ್ರಗಳ ನಂತರ ನಿರ್ದೇಶಕ ಚಂದ್ರು ಓಬಯ್ಯ ಇದೀಗ ನಾಲ್ಕನೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅದುವೇ “ವೈಭೋಗ”.

ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ‘ಯೌವ್ವನದಲ್ಲಿ ಹುಟ್ಟೋ ಪ್ರೀತಿಗೋಸ್ಕರ ಹೆತ್ತವರನ್ನು ಮರೀಬೇಡ’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರವನ್ನು ಡಾ.ಚೇತನ್ ನಿಂಗೇಗೌಡ ಅವರು ನಿರ್ಮಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಓಬಯ್ಯ, ವೈಭೋಗ, ಒಂದು ಕಮರ್ಷಿಯಲ್ ಸಿನಿಮಾ, ಯೌವ್ವನಲ್ಲಿ ಹುಟ್ಟುವ ಪ್ರೀತಿಗೋಸ್ಕರ ಹೆತ್ತವರ ಮರಿಬೇಡ, ಪ್ರೀತಿಯ ಜೊತೆಗೆ ಹೆತ್ತವರನ್ನು ಕಾಪಾಡಬೇಕು ಎಂದು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ನಿರ್ಮಾಪಕ ಡಾ.ಚೇತನ್ ಅವರು ಕಥೆಯನ್ನು ಇಷ್ಟಪಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಶ್ರೇಯಸ್ ಮತ್ತು ಸಂಜನಾ ಕದಂ ನಾಯಕ, ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ತಿಂಗಳ 20ರಿಂದ ಶೂಟಿಂಗ್ ಪ್ರಾರಂಭಿಸಿ ಚನ್ನಪಟ್ಟಣ, ಮೈಸೂರು ಸುತ್ತಮುತ್ತ 30 ದಿನಗಳ‌ ಕಾಲ‌ ಟಾಕಿ ಭಾಗ, ಅಲ್ಲದೆ ಮಂಗಳೂರು ಸುತ್ತಮುತ್ತ 10 ದಿನದಲ್ಲಿ ಹಾಡು, ಪೈಟ್‍ಗಳನ್ನು ಚಿತ್ರೀಕರಣ ಮಾಡುವ ಉದ್ದೇಶವಿದೆ. ಈಗಾಗಲೇ ರಾಮು ಅಂಡ್ ರಾಮು ಚಿತ್ರ ಸೆನ್ಸಾರ್ ಆಗಿದೆ. ಇನ್ನು “ಕರೀಮಣಿ ಮಾಲಿಕ”ಚಿತ್ರದ ಚಿತ್ರೀಕರಣ ಮುಗಿದಿದೆ ಎಂದು ವಿವರಿಸಿದರು.

ಚಂದ್ರು ಓಬಯ್ಯ

ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡಿದರೆ ಒಂದಷ್ಟು ಜನರಿಗೆ ಉದ್ಯೋಗ ಸಿಗಲಿದೆ, ವಿಜಯದಶಮಿ ಹಬ್ಬಕ್ಕೆ ಮತ್ತೊಂದು ಚಿತ್ರ ಆರಂಭಿಸಲಾಗುವುದು. ಆದಾದ ನಂತರ ಒಂದು ವರ್ಷ ಯಾವುದೇ ಸಿನಿಮಾ ಕೈಗೆತ್ತಿಕೊಳ್ಳುವುದಿಲ್ಲ, ಮಾಡುತ್ತಿರುವ ಚಿತ್ರಗಳನ್ನು ಪೂರ್ಣಗೊಳಿಸುವ ಕಡೆಗೆ ಗಮನ ನೀಡಲಾಗುವುದು ಎಂದೂ ಅವರು ಹೇಳಿಕೊಂಡರು.

ನಾಯಕ ಶ್ರೇಯಸ್ ಮಾತನಾಡಿ, ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಓಬಯ್ಯ ಅವರು ನನಗಿನ್ನೂ ಕಥೆ ಹೇಳಿಲ್ಲ. ಒಳ್ಳೆಯ ಚಿತ್ರವಾಗುವ ವಿಶ್ವಾಸವಿದೆ ಎಂದು ಹೇಳಿದರು.

ನಾಯಕಿ ಸಂಜನಾ ಕದಂ ಮಾತನಾಡಿ ನಾನು ರಂಗಭೂಮಿ‌ ಕಲಾವಿದೆ. ಮೈಸೂರಿನ ಹುಡುಗಿ, ಮಂಡ್ಯ ರಮೇಶ್ ಅವರ ನಟನಾದಲ್ಲಿ ಅಭಿನಯ ಕಲಿತಿದ್ದೇನೆ. ಮೊದಲ ಬಾರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದರು.

ಚಂದ್ರು ಓಬಯ್ಯ

ಹಿರಿಯ ಕಲಾವಿದ ನಾಗೇಂದ್ರ ಅರಸ್ ಮಾತನಾಡಿ, ಕಿರಿತೆರೆಯಲ್ಲಿ ಬರುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿಯ ಅಪ್ಪನ ಪಾತ್ರ ಮಾಡಿದ್ದೆ. ಈ ಚಿತ್ರದಲ್ಲಿ ನಾಯಕನ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಳ್ಳೆಯ ಪಾತ್ರ, ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ. ಚಂದ್ರು ಓಬಯ್ಯ ಅವರ ಜೊತೆ ಈ ಹಿಂದೆಯೂ ಕೆಲಸ ಮಾಡಿದ್ದೆ ಎಂದರು.

ನಿರ್ಮಾಪಕ ಡಾ. ಚೇತನ್ ನಿಂಗೇಗೌಡ ಮಾತನಾಡಿ ಒಳ್ಳೆಯ ಕಥೆಯನ್ನು ಚಂದ್ರು ಓಬಯ್ಯ ತಂದಿದ್ದರು. ಅಪ್ಪ, ಅಮ್ಮ, ಅಲ್ಲದೆ ಅವಿಭಕ್ತ ಕುಟುಂಬದ ಮಹತ್ವ ಹೇಳುವ ಪ್ರಯತ್ನ ನಮ್ಮ ಚಿತ್ರದಲ್ಲಿದೆ ಎಂದು ತಿಳಿಸಿದರು

ಹಿರಿಯ ಕಲಾವಿದ ಮೂಗು ಸುರೇಶ್ ಮಾತನಾಡಿ, ನಿರ್ದೇಶಕರು ಹಿರಿಯರಾಗಿರಲಿ, ಕಿರಿಯರಾಗಿರಲಿ ಕ್ಯಾಮರಾ ಮುಂದೆ ನಿಂತಾಗ ನಾನೊಬ್ಬ ಕಲಾವಿದ. ಅವರು ಹೇಳಿದಂತೆ ಮಾಡುವುದು ನನ್ನ ಕೆಲಸ. ನಿರ್ದೇಶಕರ ವಿಷಯದಲ್ಲಿ ಮೂಗು ತೂರಿಸಲ್ಲ. ಚಂದ್ರು ಓಬಯ್ಯ ಅವರ ಹಿಂದಿನ ಚಿತ್ರದಲ್ಲಿಯೂ ನಟಿಸಿದ್ದೇನೆ. ಅದರಲ್ಲಿ ನನ್ನ ಮತ್ತು ರೇಖಾದಾಸ್ ಕಾಂಬಿನೇಷನ್ ಇತ್ತು ಎಂದರು. ಛಾಯಾಗ್ರಾಹಕ ನಿರಂಜನ್ ಬೋಪಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Be the first to comment

Leave a Reply

Your email address will not be published. Required fields are marked *

Translate »
error: Content is protected !!