ಮೈಸೂರು ಮೂಲದ ರಾಘವೇಂದ್ರ ಮತ್ತು ಗೆಳೆಯರು ಸೇರಿ ಕ್ಯಾಮರಾ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಚಿತ್ರ ಚಾಂದಿನಿ ಬಾರ್ ಈ ವಾರ ತೆರೆ ಕಾಣಲಿದೆ.
ಈ ತಿಂಗಳ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ, ಇಲ್ಲಿ ಜೀವನ, ಪ್ರೀತಿ, ಪ್ರೇಮ,ತ್ಯಾಗ, ನಗು, ಅಳು ಎಲ್ಲವೂ ಇದೆ. ಹತಾಶ ಭಾವನೆಯಿಂದ ಜೀವನ ಕಟ್ಟಿಕೊಳ್ಳಲು ಹೊರಟ ಹುಡುಗ ಏನಾಗುತ್ತಾನೆ? ಆತನ ಜೀವನ ಯಾವ ಹಾದಿ ಪಡೆದುಕೊಳ್ಳುತ್ತದೆ ಎಂದು ಚಿತ್ರದಲ್ಲಿ ಹೇಳಿದ್ದೇವೆ ಎಂದರು.
ಬಾರ್‌ನಲ್ಲಿ ಕೆಲಸ ಮಾಡುತ್ತ ತಮ್ಮ ಬದುಕನ್ನು ಕಟ್ಟಿಕೊಂಡವರ ಹಿಂದಿರುವ ಕಥೆಯನ್ನು ಚಾಂದಿನಿಬಾರ್ ಮೂಲಕ ಹೇಳಹೊರಟಿದ್ದೇವೆ. ಬರಗೂರು ರಾಮಚಂದ್ರಪ್ಪ, ಮಂಜು ಸ್ವರಾಜ್ ಬಳಿ ನಿರ್ದೇಶನದ ಪಾಠ ಕಲಿತು ಮೊದಲ ಬಾರಿಗೆ ಈ ಚಿತ್ರ ನಿರ್ದೇಶಿಸಿದ್ದೇನೆ. ನಾನು ಕೂಡ ಬಾರ್ ನಲ್ಲಿ ಕೆಲಸ ಮಾಡಿದ್ದೇನೆ. ಆಗ ಅಲ್ಲಿ ನೋಡಿ, ಕೇಳಿದ ಒಂದಷ್ಟು ವಿಷಯಗಳನ್ನು ಈ ಚಿತ್ರದ ಪಾತ್ರಗಳಾಗಿಸಿದ್ದೇನೆ. ಶುಕ್ರ ಫಿಲಂಸ್ ಸೋಮಣ್ಣ ಅವರು ಚಿತ್ರ ರಿಲೀಸ್ ಮಾಡಿಕೊಡುತ್ತಿದ್ದಾರೆ ಎಂದರು.
ಬಾರ್‌ನಲ್ಲಿ ಕೆಲಸ ಮಾಡೋ ಹುಡುಗನಲ್ಲಿ ಪ್ರೀತಿ ಹೇಗೆ ಹುಟ್ಟುತ್ತದೆ? ಹೇಗೆ ಬ್ರೇಕಪ್ ಆಗುತ್ತದೆ? ನಂತರ ಆತನ ಜೀವನ ಹೇಗೆ ಸಾಗುತ್ತದೆ ಎಂಬುದನ್ನು ಒಂದಷ್ಟು ತಿರುವುಗಳ ಮೂಲಕ ಚಿತ್ರದಲ್ಲಿ ಹೇಳಲಾಗಿದೆ.
ಮೈಸೂರು ಸುತ್ತಮುತ್ತ ೪೩ ದಿನಗಳ ಕಾಲ ಈ ಚಿತ್ರಕ್ಕೆ ಬಾರ್ ಸೆಟ್ ಹಾಕಿ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಅದರಲ್ಲಿ 2 ಡ್ಯುಯೆಟ್ ಹಾಡು, ಒಂದು ಟೈಟಲ್ ಸಾಂಗ್ ಇದೆ. ವಿಶಾಖ ನಾಗಲಾಪುರ ಹಾಗೂ ಕಾರ್ತೀಕ್ ನಾಗಲಾಪುರ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಭರತ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
—–
Be the first to comment