ನವತಾರ್ ರಂಗಿನಲ್ಲಿ ಚಂದನವನದ ಸುಂದರಿಯರು

ಸೆಲೆಬ್ರಿಟಿ ಸ್ಟೈಲಿಸ್ಟ್ ಭಾರ್ಗವಿ ವಿಖ್ಯಾತಿ ಕಲರ್ಫುಲ್ ಪ್ರಯತ್ನ

ಕರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸಿನಿಮಾ ಕ್ಷೇತ್ರದ ಜತೆಗೆ ಫ್ಯಾಷನ್‍ ಲೋಕಕ್ಕೂ ಅಷ್ಟೇ ಪ್ರಮಾಣದ ಸಮಸ್ಯೆ ಎದುರಾಗಿತ್ತು. ಇದೀಗ ಮತ್ತೆ ಎಲ್ಲವೂ ಹಳೇ ಲಯಕ್ಕೆ ಮರಳುತ್ತಿದೆ. ನಿಂತಿದ್ದ ಕೆಲಸಗಳು ನಿಧಾನಗತಿಯಲ್ಲಿ ಆರಂಭವಾಗಿವೆ. ಅದೇ ರೀತಿಯಲ್ಲಿ ಸೆಲೆಬ್ರಿಟಿ ಡಿಸೈನರ್ ಆಗಿರುವ ಭಾರ್ಗವಿ ವಿಖ್ಯಾತಿ ಸಹ ಕಾರ್ಯ ಪ್ರವೃತರಾಗಿದ್ದಾರೆ. ದಸರಾ ಪ್ರಯುಕ್ತ ನವತಾರ್ ಹೆಸರಿನ ಕಲರ್ಫುಲ್ ಕಾನ್ಸೆಪ್ಟ್ ಜತೆಗೆ ಆಗಮಿಸಿದ್ದಾರೆ.

ಏನಿದು ನವತಾರ್ ಕಾನ್ಸೆಪ್ಟ್?: ದಸರಾ ಹಬ್ಬವನ್ನು ಒಂಭತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಒಂಭತ್ತು ದೇವಿಯರ ಪೂಜಾಚರಣೆಯೂ ನೆರವೇರುತ್ತದೆ. ಇದೀಗ ಆ ಪರಿಕಲ್ಪನೆಯಡಿಯಲ್ಲಿ ನವತಾರ್ ಅನ್ನೋ ಫೋಟೋಶೂಟ್‍ ಮತ್ತು ವಸ್ತ್ರ ವಿನ್ಯಾಸ ಮಾಡಿದ್ದಾರೆ ಭಾರ್ಗವಿ ವಿಖ್ಯಾತಿ. 9 ಸಿನಿಮಾ ಸೆಲೆಬ್ರಿಟಿಗಳನ್ನು ಆಯ್ದುಕೊಂಡು ಅವರಿಗೆ ಬಗೆಬಗೆ ರೀತಿಯ ಕಾಸ್ಟೂಮ್‍ ವಿನ್ಯಾಸ ಮಾಡಿ, ಫೋಟೋಶೂಟ್‍ ಮಾಡಿಸಿದ್ದಾರೆ ‘ಇಲ್ಲಿ ದೇವಿಯರ ಅವತಾರವನ್ನು ಸೃಷ್ಟಿಸಲಾಗಿಲ್ಲ. ಬದಲಿಗೆ ಅವರನ್ನೇ ಹೋಲುವ ಮತ್ತು ಅದಕ್ಕೆ ಒಂದಿಷ್ಟು ಮಾರ್ಡನ್ ಟಚ್‍ ಕೊಟ್ಟು ಫೋಟೋಶೂಟ್‍ ಮಾಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಭಾರ್ಗವಿ ವಿಖ್ಯಾತಿ.

ಬಗೆಬಗೆ ಪರಿಕಲ್ಪನೆಯಲ್ಲಿ ತಾರೆಯರ ಮಿಂಚಿಂಗ್‍: ಸೆಲೆಬ್ರಿಟಿ ಸ್ಟೈಲಿಸ್ಟ್ ಆಗಿರುವ ಭಾರ್ಗವಿ ವಿಖ್ಯಾತಿ ಸ್ಯಾಂಡಲ್ವುಡ್‍ನ 9 ಜನ ಸೆಲೆಬ್ರಿಟಿಗಳನ್ನು ಆಯ್ದುಕೊಂಡಿದ್ದಾರೆ. ಆ ಒಂಭತ್ತು ತಾರೆಯರಿಗೆ ವರ್ಣಮಯ ಕಾಸ್ಟೂಮ್‍ ಡಿಸೈನ್‍ ಮಾಡಿದ್ದಾರೆ. ಆ ನಟಿಯರ ವಿವರ ಇಲ್ಲಿದೆ. ನಟಿ ಶ‍್ರೀಲೀಲಾ ಅಪ್ಪಟ ಮರಾಠಿ ಯುವರಾಣಿಯಾಗಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು, ಕುದುರೆ ಏರಿ ಹಣೆ ಮೇಲೆ ಅರ್ಧ ಚಂದ್ರನನ್ನು ಧರಿಸಿ ಪೋಸ್‍ ನೀಡಿದ್ದಾರೆ. ಅದೇ ರೀತಿ ದೀಪಿಕಾ ದಾಸ್ ಕೈಯಲ್ಲಿ ಕತ್ತಿ ಹಿಡಿದು, ಲೆಹೆಂಗಾ ತೊಟ್ಟು ಗಂಭೀರವಾದ ಮುಖಭಾವ ನೀಡಿ ಉತ್ತರ ಭಾರತದ ರಾಣಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ದಾಂಡಿಯಾ ನೃತ್ಯ ಮಾದರಿಯಲ್ಲಿ ಡಾನ್ಸ್ ಶೈಲಿಯ ಘರ್ಬಾ ಥರಹದ ಕಾಸ್ಟೂಮ್‍ನಲ್ಲಿ ಕಂಗೊಳಿಸಿದ್ದಾರೆ ನಿಶ್ವಿಕಾ ನಾಯ್ಡು. ಹರ್ಷಿಕಾ ಪೂಣಚ್ಚ ಪಕ್ಕಾ ದಕ್ಷಿಣ ಭಾರತದ ಮಹಾರಾಣಿ ಅವತಾರ ಎತ್ತಿದ್ದಾರೆ. ಕೃಷಿ ತಾಪಂಡ ಹಳದಿ ಮತ್ತು ಕೇಸರಿ ರಂಗಿನಲ್ಲಿ ಮುಳುಗಿದ್ದಾರೆ. ಬಿಂದಿಗೆ ಹಿಡಿದು, ನೀರಿನ ಕೊಳದ ಪಕ್ಕ ಕುಳಿತಿದ್ದಾರೆ.
ನಟಿ ಕಾವ್ಯಾ ಶೆಟ್ಟಿ ವೀಣೆ ಹಿಡಿದು ಸರಸ್ವತಿಯಂತೆ ಗೋಚರವಾಗಿದ್ದಾರೆ. ಕಾವ್ಯಾ ಶಾಸ್ತ್ರಿ ಕಮಲದ ಹೂವಿನ ಮೇಲೆ ಕುಳಿತ ಭಂಗಿಯಲ್ಲಿ ಕಂಡರೆ, ಮಲೆನಾಡ ಹುಡುಗಿಯ ಸೊಗಡಿನಲ್ಲಿ ಸಂಪದ ಮಿಂಚಿದ್ದಾರೆ. ಇಂಡೋ ವೆಸ್ಟರ್ನ್ ಶೈಲಿ ಉಡುಗೆಯಲ್ಲಿ ಶಾಲಿನಿ ಗೌಡ ಕಾಣಿಸಿಕೊಂಡಿದ್ದಾರೆ. ಈ ಒಂಭತ್ತು ನಟಿಯರ ವಿನ್ಯಾಸಗಳ ಜತೆಗೆ ಇಡೀ ಡಿಸೈನಿಂಗ್‍ ತಂಡವೂ ತಮ್ಮದೇ ಆದ ವಿನ್ಯಾಸವೊಂದರಲ್ಲಿ ಮಿಂಚಿದೆ.

ಎರಡೂವರೆ ತಿಂಗಳಿಂದಲೇ ನಡೆದಿದೆ ತಯಾರಿ: ಲಾಕ್‍ಡೌನ್‍ ಕೊಂಚ ಸಡಿಲಿಕೆ ಆದಾಗಿನಿಂದ ಫ್ಯಾಷನ್‍ ಡಿಸೈನಿಂಗ್‍ ಕೆಲಸವನ್ನು ಮರಳಿ ಹಳಿಗೆ ಕರೆತರುವ ಯತ್ನಕ್ಕೆ ಕೈ ಹಾಕಿರುವ ಭಾರ್ಗವಿ, ನವರಾತ್ರಿಗೆ ಏನಾದರೂ ವಿಶೇಷವಾದದ್ದನ್ನೇ ನೀಡಬೇಕೆಂದು ನವತಾರ್ ಕಾನ್ಸೆಪ್ಟ್ ಆಯ್ದುಕೊಂಡಿದ್ದಾರೆ. ಎಲ್ಲ ಸೆಲೆಬ್ರಿಟಿಗಳನ್ನು ಸಂಪರ್ಕಿಸಿ ಅವರಿಂದ ಒಪ್ಪಿಗೆ ಪಡೆದು ಅವರವರಿಗೆ ಒಪ್ಪು ರೀತಿಯ ವಿವಿಧ ಬಗೆಯ ವಸ್ತ್ರಗಳನ್ನು ವಿನ್ಯಾಸವನ್ನೂ ಮಾಡಿ, ಫೋಟೋಶೂಟ್ ಮಾಡಿಸಲಾಗಿದೆ. ಬೆಂಗಳೂರು ಮೂವಿಸ್‍ ಮತ್ತು ಪಿಕಾಕ್ ಗ್ರೋ ರೆಸಾರ್ಟ್‍ನಲ್ಲಿ ಇವರೆಲ್ಲರ ಫೋಟೋಶೂಟ್‍ ಮಾಡಿಸಲಾಗಿದೆ.

ತಾಂತ್ರಿಕ ವರ್ಗದ ಹಿನ್ನೆಲೆ: ಎಲ್ಲ ಒಂಭತ್ತು ಸೆಲೆಬ್ರಿಟಿಗಳ ಕಾಸ್ಟೂಮ್‍ ವಿನ್ಯಾಸದ ಜವಾಬ್ದಾರಿಯನ್ನು ಭಾರ್ಗವಿ ವಿಖ್ಯಾತಿ ವಹಿಸಿಕೊಂಡರೆ, ಮೇಕಪ್‍ ಆರ್ಟಿಸ್ಟ್ ಆಗಿ ನಿಖಿತಾ ಆನಂದ್‍ ಚೆಂದದ ಮೇಕಪ್‍ ಮಾಡಿದ್ದಾರೆ. ಎಲ್ಲರನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದವರು ರೇನ್‍ಬೋ ಫೋಟೋಗ್ರಾಫಿಯ ಕಿರಣ್‍ ಮತ್ತು ಹೂವೇಶ್‍. ಶ‍್ವೇತಾ ಇಂಚರ್ ಇಡೀ ಕಾನ್ಸೆಪ್ಟ್ನಲ್ಲಿ ಭಾರ್ಗವಿ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಅಭೂಷಣ್ ಮತ್ತು ಆಮ್ರಪಾಲಿ ಜುವೆಲ್ಸ್ ಆಭರಣ ಡಿಸೈನ್ ಉಸ್ತುವಾರಿವಹಿಸಿಕೊಂಡಿದೆ.

ಭಾರ್ಗವಿ ವಿಖ್ಯಾತಿ ಹಿನ್ನೆಲೆ: ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್‍ ಡಿಸೈನಿಂಗ್‍ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಭಾರ್ಗವಿ, ಶ್ರೀಲೀಲಾ, ಆರ್ಯನ್ ಸಂತೋಷ್, ಹರ್ಷಿಕಾ ಪೂಣಚ್ಚ ಸೇರಿ ಕೆಲ ಸೆಲೆಬ್ರಿಟಿಗಳ ಪರ್ಸನಲ್ ಸ್ಟೈಲಿಸ್ಟ್ ಆಗಿದ್ದಾರೆ. ಇದೀಗ ಇನ್ನೇನು ಬಿಡುಗಡೆ ಹಂತದಲ್ಲಿರುವ ಡಿಯರ್ ಸತ್ಯ ಚಿತ್ರಕ್ಕೂ ಮೊದಲ ಬಾರಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ ಭಾರ್ಗವಿ. ‘ಸದ್ಯ ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ನಾಲ್ಕು ವರ್ಷ ಪೂರೈಸಿದ್ದೇನೆ. ಮುಂದಿನ ದಿನಗಳಲ್ಲಿ ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಈ ವೃತ್ತಿಯನ್ನು ವಿಸ್ತರಿಸುವ ಕನಸಿದೆ. ಅದರಂತೆ ಫ್ಯಾಷನ್‍ ಡಿಸೈನಿಂಗ್‍ಗೆ ಸಂಬಂಧಿಸಿದಂತೆ. ಬೃಹತ್‍ ಸ್ಟೋರ್ ತೆರೆಯುವ ಕನಸೂ ಇದೆ. ಕರೊನಾ ಇಲ್ಲ ಎಂದಿದ್ದರೆ. ಇಷ್ಟೊತ್ತಿಗಾಗಲೇ ನನ್ನ ಕನಸಿನ ಫ್ಯಾಷನ್‍ ಸ್ಟೋರ್ ಲಾಂಚ್‍ ಆಗಿರುತ್ತಿತ್ತು. ಇದೀಗ ಇನ್ನಷ್ಟು ದಿನಕ್ಕೆ ಅದನ್ನು ಮುಂದೂಡಿದ್ದೇನೆ. ಇದರ ಜತೆಗೆ ನನ್ನ ಸ್ವಂತ ಪ್ರೊಡಕ್ಷನ್‍ ಸಂಸ್ಥೆ ತೆರೆಯಬೇಕು ಎಂದುಕೊಂಡಿದ್ದೇನೆ. ಆ ಬಗ್ಗೆಯೂ ಕೆಲಸ ನಡೆಯುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಭಾರ್ಗವಿ.

ಕೋಟ್‍

ದಸರಾ ದೇವಿಯರ ಹಬ್ಬ. ಈ ಒಂಭತ್ತು ದಿನದ ಸಂಭ್ರಮವನ್ನು ನವತಾರ್ ಮೂಲಕ ಆಚರಣೆ ಮಾಡಿದ್ದೇವೆ. ಸಿನಿಮಾ ತಾರೆಯರನ್ನು ಅವರವರ ಅಭಿಮಾನಿಗಳು ವಿವಿಧ ಫೋಟೋಶೂಟ್‍ ಮೂಲಕ ಕಣ್ತುಂಬಿಕೊಂಡಿದ್ದಾರೆ. ಇದೀಗ ಅದೆಲ್ಲದಕ್ಕೂ ವಿಭಿನ್ನವಾದ ಪ್ರಯೋಗ ನಾವು ಮಾಡಿದ್ದೇವೆ. ಕಲರ್ಫುಲ್ ಥೀಮ್‍ ಮತ್ತು ಪರಿಕಲ್ಪನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಶೈಲಿಯ ಉಡುಪುಗಳನ್ನು ವಿನ್ಯಾಸ ಮಾಡಿದ್ದೇನೆ.
| ಭಾರ್ಗವಿ ವಿಖ್ಯಾತಿ, ಫ್ಯಾಷನ್ ಡಿಸೈನರ್‍, ಸೆಲೆಬ್ರಿಟಿ ಸ್ಟೈಲಿಸ್ಟ್

This Article Has 1 Comment
  1. Pingback: dig this

Leave a Reply

Your email address will not be published. Required fields are marked *

Translate »
error: Content is protected !!