ಸಾಕಷ್ಟು ದಿನಗಳಿಂದ ಚಿತ್ರರಂಗದ ಸೆಲೆಬ್ರಿಟಿಗಳು, ಅದರಲ್ಲೂ ಕನ್ನಡದ ಸ್ಟಾರ್ ನಟರು ಕೊರೊನಾ ವಾರಿಯರ್ಗಳಾಗಿ ಜನರ ಸಹಾಯಕ್ಕೆ ನಿಲ್ಲಬೇಕು ಅನ್ನುವ ಕೂಗು ಕೇಳಿ ಬರುತ್ತಲೇ ಇದೆ. ಆದರೆ, ಯಾವುದೇ ಸ್ಟಾರ್ ನಟರೂ ಇನ್ನೂ ಮುಂದೆ ಬಂದಿಲ್ಲ. ನಮ್ಮಲ್ಲಿ ಪರಿಸ್ಥಿತಿ ಹೀಗಿದ್ದರೆ, ಬಾಲಿವುಡ್ ನಲ್ಲಿ ಸೋನು ಸೋದು ಆದಿಯಾಗಿ ಸಾಕಷ್ಟು ಸಿನಿಮಾ ಮಂದಿ ಕೊರೊನಾ ಸಂಕಷ್ಟದಲ್ಲಿ ಜನರ ಪಾಲಿಗೆ ನಿಂತಿದ್ದಾರೆ. ಈಗ, ಬೃಹತ್ ಮುಂಬೈ ಮಹಾನಗರ ಪಾಲಿಕೆ ಜೊತೆ ಕೈಜೋಡಿಸಿರುವ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಚಿತ್ರರಂಗದ ಕೆಲ ಗೆಳೆಯರು ಸುಮಾರು ಒಂದು ಕೋಟಿ ರೂಪಾಯಿ ಧನ ಸಹಾಯ ಮಾಡಿದ್ದಾರೆ. ಆ ಹಣದಲ್ಲಿ ಮುಂಬೈನ ಶಿವಾಜಿ ಪಾರ್ಕ್ ನಲ್ಲಿರುವ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಲ್ ನಲ್ಲಿ 20 ಬೆಡ್ ಗಳ ಐಸಿಯು ನಿರ್ಮಿಸಲಾಗಿದೆ.
ಪ್ರತಿದಿನ ಸಾವಿರಾರು ಹೊಸ ಹೊಸ ಕೊರೋನಾ ಪಾಸಿಟಿವ್ ಕೇಸ್‌ಗಳು ಬರುತ್ತಿದ್ದು, ಆಕ್ಸಿಜನ್, ವೆಂಟಿಲೇಟರ್, ಐಸಿಯು ಕೊರತೆ ಎಲ್ಲೆಡೆ ಉಂಟಾಗಿದೆ. ಮಹಾರಾಷ್ಟದಲ್ಲೂ ಪರಿಸ್ಥಿತಿ ಸರಿ ಇಲ್ಲ. ಇನ್ನು ಮುಂಬೈನಲ್ಲಂತೂ ಈ ಸಮಸ್ಯೆ ತೀವ್ರ ಹೆಚ್ಚಾಗಿದೆ. ಪ್ರತಿ ದಿನ ಕಡಿಮೆ ಅಂದರೂ ನಾಲ್ಕು ಸಾವಿರ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅವರಲ್ಲಿ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಕ್ಸಿಜನ್, ಐಸಿಯು ಅಥವಾ ವೆಂಟಿಲೇಟರ್‌ಗಳ ಕೊರತೆ ಸಾಕಷ್ಟಿದೆ.
ಈ ಎಲ್ಲಾ ಸಮಸ್ಯೆಗಳು ನಮ್ಮಲ್ಲಿ ಇದ್ದರೂ ಯಾವೊಬ್ಬ ನಟನೂ ಎಚ್ಚೆತ್ತಿಲ್ಲ. ನಾನು ನನ್ನವರು ಸೇಫ್ ಆಗಿದ್ರೆ ಸಾಕು ಅನ್ನುವ ಮನೋಭಾವದಲ್ಲಿರುವ ಸ್ಯಾಂಡಲ್‌ವುಡ್ ನಟರು, ಬಾಲಿವುಡ್ ಅನ್ನು ಮಾದರಿಯನ್ನಾಗಿಟ್ಟುಕೊಂಡು ಈ ಕೂಡಲೇ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಅನ್ನುವುದು ಬಿಸಿನಿಮಾಸ್‌ನ ನಿರೀಕ್ಷೆ
Be the first to comment