ರ್ಯಾಪರ್ ಚಂದನ್ ಶೆಟ್ಟಿ ಯುವ ಆವೇಗದ ಸಿನಿಮಾ ನಾಯಕನಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಇಂಥಾದ್ದೊಂದು ಸುಳಿವನ್ನು ಕೆಲ ದಿನಗಳ ಹಿಂದೆ ಚಿತ್ರತಂಡವೇ ಬಿಟ್ಟುಕೊಟ್ಟಿತ್ತು. ಒಂದು ಪ್ರೋಮೋ ಮೂಲಕ ಕುತುಹಲವನ್ನು ಕಾಯ್ದಿಟ್ಟುಕೊಳ್ಳುವ ಪ್ರಯತ್ನವನ್ನೂ ಮಾಡಲಾಗಿತ್ತು. ಕಡೆಗೂ ಆ ಸಿನಿಮಾ ಟೈಟಲ್ ಬಿಡುಗಡೆಗೊಂಡಿದೆ. ಇದೊಂದು ಕಾಲೇಜಿನ ಸುತ್ತ ಘಟಿಸುವ ಸಿನಿಮಾವಾದ್ದರಿಂದ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂಬ ಶಿರ್ಷಿಕೆಯನ್ನಿಡಲಾಗಿದೆ. ಅದನ್ನು ವಿದ್ಯಾರ್ಥಿಗಳೇ ಬಿಡುಗಡೆಗೊಳಿಸಿ ಸಂಭ್ರಮಿಸಿದ್ದಾರೆ.
ಇದು ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ. ಈ ಹಿಂದೆ ಶ್ರೀಮುರುಳಿ ನಾಯಕನಾಗಿ ನಟಿಸಿದ್ದ `ಲೂಸ್ ಗಳು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದವರು ಅರುಣ್. ಅವರೀಗ ಈ ದಿನಮಾನದ ಟ್ರೆಂಡಿಗೆ ತಕ್ಕಂತೆ, ಹೊಸಾ ಬಗೆಯ ಕಥಾನಕದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ರೂಪಿಸಲು ಮುಂದಾಗಿದ್ದಾರಂತೆ. ಈ ಶೀರ್ಷಿಕೆಯ ಅನಾವರಣದ ವಿಚಾರದಲ್ಲಿಯೇ ಚಿತ್ರತಂಡ ಒಂದಷ್ಟು ಕ್ರಿಯಾಶೀಲ ನಡೆಯನ್ನು ಅನುಸರಿಸಿದೆ. ರಾಜ್ಯದ ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಈ ಶೀರ್ಷಿಕೆ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಅದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂಥಾ ಚಿತ್ರಗಳು ದೊಡ್ಡ ಪ್ರಮಾಣದಲ್ಲಿಯೇ ಗೆಲುವು ದಾಖಲಿಸಿದ್ದವು. ಆ ನಂತರ ಒಂದಷ್ಟು ವರ್ಷಗಳ ಕಾಲ ಆ ಶೈಲಿಯ ಸಿನಿಮಾಗಳು ಬಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ದೇರ್ ಡೆವಿಲ್ ಮುಸ್ತಫಾದಂಥಾ ಕಾಲೇಜು ಕೇಂದ್ರಿತ ಕಥನಗಳು ಸೂಪರ್ ಹಿಟ್ ಆಗಿವೆ. ಈ ಮೂಲಕ ಆ ಬಗೆಯ ಸಿನಿಮಾಗಳ ಕೊರತೆ ಒಂದು ಮಟ್ಟಿಗೆ ನೀಗಿದಂತಾಗಿದೆ. ಈ ಸಾಲಿನಲ್ಲಿ ದೊಡ್ಡ ಗೆಲುವನ್ನು ತಮ್ಮದಾಗಿಸಿಕೊಳ್ಳುವ ಕನಸು, ಭರವಸೆಯೊಂದಿಗೆ, ಅರುಣ್ ಅಮುಕ್ತ ಸಾರಥ್ಯದಲ್ಲಿ ಈ ತಂಡ ಅಖಾಡಕ್ಕಿಳಿದಿದೆ. ಅಂದಹಾಗೆ, ಈ ಬಗೆಯ ಸಿನಿಮಾಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವಂಥಾ ಅನೇಕ ಅಂಶಗಳು ಈ ಚಿತ್ರದಲ್ಲಿರಲಿವೆ ಎಂಬುದು ಚಿತ್ರತಂಡದ ಮಾತು.
ತಾರಾಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ಭಿನ್ನವಾಗಿ ಕಟ್ಟಿಕೊಡಲು ಚಿತ್ರತಂಡ ತಯಾರಾಗಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭಣವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ಒಂದಷ್ಟು ಮಹತ್ವದ ಸುದ್ದಿಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.
Be the first to comment