ಈ ಹಿಂದೆ ಆಸ್ಕರ್, ಮನಸಿನ ಮರೆಯಲಿ, ಮಿಸ್ ಮಲ್ಲಿಗೆ, ಮೋನಿಕಾ ಈಸ್ ಮಿಸ್ಸಿಂಗ್‍ನಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಈಗ ಕಾಮಿಡಿ ಥ್ರಿಲ್ಲರ್ ಜಾನರ್ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದ ಹೆಸರು “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ”. ಆಸ್ಕರ್ ಕೃಷ್ಣ ಅವರೇ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿರುವ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರದ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ.
ಇತ್ತೀಚೆಗಷ್ಟೇ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದ್ದು ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಹ ನೆರವೇರಲಿದೆ. ಕೌಂಡಿನ್ಯ ಅವರ “ಮೈ ಡಿಯರ್ ಫ್ರೆಂಡ್” ಎನ್ನುವ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಜೊತೆಗೆ ಚಿತ್ರದಲ್ಲಿ ಬರುವ ಮತ್ತೊಂದು ಪ್ರಮುಖ ಪಾತ್ರವನ್ನು ಸಹ ಅವರು ನಿಭಾಯಿಸಿದ್ದಾರೆ. ಮಲಯಾಳಿ ಚೆಲುವೆ ಗೌರಿನಾಯರ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅನಂತ್ ಆರ್ಯನ್ ಅವರ ಸಂಗೀತ ಸಂಯೋಜನೆ, ಗಗನ್‍ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಅವರ ಸಂಕಲನ, ಅಕುಲ್ ಅವರ ನೃತ್ಯ ನಿರ್ದೇಶನ ಹಾಗೂ ವೈಲೆಂಟು ವೇಲು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರವನ್ನು ಕೋವಿಡ್ ಕಾಟದಿಂದಾಗಿ ಬಹುತೇಕ ಬಂದ್ ಆಗಿರುವ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳು ತೆರೆಯುತ್ತಿದ್ದಂತೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಆಸ್ಕರ್ ಕೃಷ್ಣ ಹಾಗೂ ಲೋಕೇಂದ್ರಸೂರ್ಯ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಗೌರಿ ನಾಯರ್ ನಾಯಕಿಯಾಗಿ ಹಾಗೂ ರೆಡ್ ಅಂಡ್ ವೈಟ್ ಸೆವೆನ್‍ರಾಜ್ ಮತ್ತು ಸಿ.ವಿ.ಜಿ. ಅವರು ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ.
Be the first to comment