ವರನಟ ಡಾ. ರಾಜ್ ಕುಮಾರ್ ಅವರ ಹಿರಿಯ ಪುತ್ರ ಎಂಬ ಹಿನ್ನೆಲೆಯೊಂದಿಗೆ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದಿದ್ದು ನಟ ಶಿವರಾಜ್ ಕುಮಾರ್. ಅಪ್ಪನ ಹೆಸರು ಹೇಳಿಕೊಂಡು ಬಂದ ಇನ್ನೊಬ್ಬ ಹೀರೋ ಎಂದು ಆಡಿಕೊಳ್ಳುವವರಿಗೆ, ಅಪ್ಪನ ಹೆಸರು ಹೆಚ್ಚೆಂದರೆ ಹ್ಯಾಟ್ರಿಕ್ ಹೀರೋ ಎನಿಸಿಕೊಳ್ಳಲು ಸಹಾಯ ಮಾಡಬಹುದೇ ಹೊರತು, ನೂರು ಸಿನಿಮಾಗಳನ್ನು ಮಾಡಿ ಸೆಂಚುರಿ ಸ್ಟಾರ್ ಎನಿಸಿಕೊಳ್ಳಲು ಅಲ್ಲ ಎಂಬುದನ್ನು ತಮ್ಮ ಸ್ವಂತ ಕೆಪ್ಯಾಸಿಟಿಯ ಮೂಲಕ ನಿರೂಪಿಸಿದವರು ಶಿವಣ್ಣ. ಜೋಗಯ್ಯ ಚಿತ್ರದ ಮೂಲಕ ನೂರು ಚಿತ್ರಗಳನ್ನು ಮಾಡಿ ಗಾಜ”ನೂರ” ಗಂಡು ಎಂಬ ಹೆಸರನ್ನು ಅನ್ವರ್ಥ ಮಾಡಿಕೊಂಡರು ಶಿವರಾಜ್ ಕುಮಾರ್.
ಎನರ್ಜಿ ಅನ್ನೋದು ತಾನು ಎಲ್ಲಾ ಕಡೆ ಇರೋಕಾಗಲ್ಲ ಅಂತಲೇ ಶಿವರಾಜ್ ಕುಮಾರ್ ಅವರನ್ನು ಸೃಷ್ಠಿ ಮಾಡಿತು ಅನ್ನೋ ಮಾತು ಚಾಲ್ತಿಗೆ ಬರುವಂತೆ ಮಾಡಿದ್ದು ಶಿವಣ್ಣನ ತಾಕತ್ತು. ತಾಕತ್ತು, ಗತ್ತು, ಗಮ್ಮತ್ತು, ಕಣ್ಣಲ್ಲಿರೋ ಮತ್ತು, ಅಪ್ಪನಿಂದ ಬಂದ ನಟನೆ ಸ್ವತ್ತು ಎಲ್ಲವನ್ನೂ ಇಟ್ಟುಕೊಂಡು ಬೆಳೆದರೂ, ಈಗಲೂ ಚಿತ್ರರಂಗದಲ್ಲಿ ಶ್ರದ್ಧೆಯಿಂದ ಕೃಷಿ ಮಾಡುತ್ತಿರುವ ಎತ್ತು, ಈ ಮುತ್ತುರಾಜನ ಮುತ್ತು.
ಸಿನಿಮಾಗಳ ವಿಷಯಕ್ಕೆ ಬಂದರೆ, ಶಿವಣ್ಣ ಸಿಂಹದ ಮರಿಯೂ ಆಗಬಲ್ಲರು, ತಂಗಿಯನ್ನು ತವರಿಗೆ ಕರೆಯಬಲ್ಲ ಅಕ್ಕರೆಯ ಅಣ್ಣನೂ ಆಗಬಲ್ಲರು, ಅದೇ ತಂಗಿ ಮಗನ ತೊಟ್ಟಿಲಲ್ಲಿ ಮಗುವಾಗಬಲ್ಲರು, ರೊಮ್ಯಾಂಟಿಕ್ ಚಿತ್ರಗಳಲ್ಲಿ ಅವರು ತಮ್ಮೊಂದಿಗೆ ಅಭಿನಯಿಸಿದ ಎಲ್ಲ ನಾಯಕಿಯರಿಗೂ ಜನುಮದ ಜೋಡಿಯೇ.
ಒಂದು ಕ್ಷಣ ಇವತ್ತಿನ ಶಿವಣ್ಣನ ಅಭಿಮಾನಿ ಬಳಗವನ್ನು ಗಮನಿಸಿದರೆ ಅಲ್ಲಿ ನಿಮಗೆ ಅಖಿಲ ಕರ್ನಾಟಕ ಯುವಕರ ಸಂಘವೇ ಎದ್ದು ಕಾಣುತ್ತದೆ. ಶಿವಣ್ಣ ಚಿತ್ರರಂಗಕ್ಕೆ ಬಂದು ದಶಕಗಳೇ ಕಳೆದಿವೆ. ಆಗ ಅವರ ಸಿನಿಮಾಗಳನ್ನು ನೋಡಿ ಅಭಿಮಾನಿಗಳಾಗಿದ್ದ ಶಿವಣ್ಣನ ವಯಸ್ಸಿನವರೆಲ್ಲಾ ಈಗ ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿಗೆ ಬಂದಿದ್ದಾರೆ. ಆದರೂ ಶಿವಣ್ಣ ಔಟ್ ಡೇಟೆಡ್ ಆಗಿಲ್ಲ. ಯಾಕಂದ್ರೆ ಅವರು ಔಟ್ ಅಂಡ್ ಯಂಗ್ ಹೀರೋ. ಹಾಗಾಗಿ ಈಗಿನ ಪೀಳಿಗೆಯವರಿಗೂ ಶಿವಣ್ಣ ಅಂದ್ರೆ ಇಷ್ಟ. ಈಗಲೂ ಶಿವಣ್ಣ ಅವರ ಚಿತ್ರ ಹಿಟ್ ಆಗಲೀ, ಫ್ಲಾಪ್ ಆಗಲೀ ಎಲ್ಲ ಹೊಸ ಹೀರೋಗಳನ್ನೂ ಮೀರಿಸುವಂತೆ ಅವರ ಚಿತ್ರದ ಬಿಡುಗಡೆಯ ಮೊದಲ ಮೂರು ದಿನದ ಕ್ರೇಜ್ ನೋಡಲು ಎರಡು ಕಣ್ಣು ಸಾಲದು. ಹಾಗಾಗಿ, ಸಿಟ್ಟು ಬಂದಾಗ ಮಾತ್ರ ಮೂರನೇ ಕಣ್ಣು ತೆರೆಯುವ ಆ ಶಿವ ಕೂಡ, ಶಿವಣ್ಣನ ಅಭಿಮಾನಿಗಳ ಸಂಭ್ರಮವನ್ನು ನೋಡಲು ತನ್ನ ಮೂರನೇ ಕಣ್ಣನ್ನು ಪ್ರೀತಿಯಿಂದಲೇ ತೆರೆಯಬೇಕು. ಶಿವಣ್ಣ ಇನ್ನೂ ಯಂಗ್ ಅನ್ನೋದನ್ನ ಪ್ರೂವ್ ಮಾಡುವಂತೆ ಇವತ್ತಿನ ಯುವ ನಾಯಕ ನಟರ ಚಿತ್ರಗಳು ಶಿವಣ್ಣರ ಚಿತ್ರಗಳೊಂದಿಗೆ ಕಾಂಪೀಟ್ ಮಾಡುತ್ತವೆ. ಅದಕ್ಕೆ, ಶಿವಣ್ಣ ಒಬ್ಬ ಕಂಪ್ಲೀಟ್ ನಟ ಆಗಿರೋದೇ ಕಾರಣ.
ಮಾತೆತ್ತಿದರೆ ಅಧಿಕಾರದ ಅಮಲಿನಲ್ಲೇ ಮಾತನಾಡುವ ಅನೇಕರ ಮುಂದೆ, ಚಿತ್ರರಂಗದಲ್ಲಿ ಏನೇ ಸಮಸ್ಯೆಯಾದರೂ, ನಾನು ಯಾವ ನಾಯಕನೂ ಅಲ್ಲ ಎಂದು ಹೇಳಿಕೊಳ್ಳುತ್ತಲೇ, ಚಿತ್ರರಂಗದ ಉಳಿವಿಗಾಗಿ ನಿಲ್ಲುವ ಮೊದಲ ಕಾಲು ಶಿವಣ್ಣನದ್ದು. ಆಮೇಲೆ ಅವರು ಒಂದು ಕಾಲು ಮಾಡಿದರೆ ಸಾಕು ಚಿತ್ರರಂಗವೇ ಬಂದು ಶಿವಣ್ಣನ ಪಕ್ಕದಲ್ಲಿ ಬಂದು ನಿಲ್ಲುತ್ತದೆ. ಆದರೂ ಶಿವಣ್ಣ ಎಂದೂ ತಮ್ಮನ್ನು ತಾವು ಚಿತ್ರರಂಗದ ನಾಯಕ ಎಂದು ಹೇಳಿಕೊಂಡಿಲ್ಲ. ಶಿವಣ್ಣನ ವ್ಯಕ್ತಿತ್ವವೇ ಹಾಗೆ. ಅವರಿಗೆ ತೆರೆಯ ಮೇಲೆ ಮಾತ್ರ ಬಣ್ಣ ಹಚ್ಚಲು ಬರುತ್ತದೆ.
ಸಿನಿಮಾಗಳ ವಿಷಯಕ್ಕೆ ಬಂದರೆ ಅಣ್ಣಾವ್ರನ್ನು ಬಿಟ್ಟರೆ ಬಹುಷಃ ಅವರಷ್ಟು ವೆರೈಟಿ ಚಿತ್ರಗಳನ್ನು ಕೊಟ್ಟ ಇನ್ನೊಬ್ಬ ಕನ್ನಡದ ನಾಯಕ ನಟ ಅಂದ್ರೆ ಶಿವರಾಜ್ ಕುಮಾರ್ ಅಂದ್ರೆ ತಪ್ಪಿಲ್ಲ. ಹಾಗೆ ನೋಡಿದರೆ, ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಸ್ಯಾಂಡಲ್ ವುಡ್ ಬಾಸ್ ಎನಿಸಿಕೊಂಡ ನಟನೊಬ್ಬ ಕೇವಲ ಕಮರ್ಷಿಯಲ್ ಆಗಿ ಯೋಚನೆ ಮಾಡಬೇಕು. ಆದರೆ ಶಿವಣ್ಣ ಹಾಗಲ್ಲ. ಇದೇ ಕಾರಣಕ್ಕೆ ಕನ್ನಡ ಚಿತ್ರರಂಗದ ಪಾಲಿಗೆ, ಶಿವಣ್ಣ ಅಂದ್ರೆ ಕೇವಲ ಸಿಂಹದ ಮರಿಯಲ್ಲ, ಗಂಡುಗಲಿ ಅಲ್ಲ, ಅವರ ಓಂ ಚಿತ್ರದ ಪಾತ್ರವೇ “ಸತ್ಯ”ವಲ್ಲ, ಅವರು ಜೋಗಿ, ಜೋಗಯ್ಯ ಅಷ್ಟೇ ಅಲ್ಲ, ಗುಮ್ಮುವ ಟಗರಷ್ಟೇ ಅಲ್ಲ, ಆತ ಭೂಮಿ ತಾಯಿಯ ಚೊಚ್ಚಲ ಮಗ, ಹಗಲು ವೇಷದ ಕೂಸು, ಚಿಗುರಿದ ಕನಸುಗಳ ಬೆನ್ನತ್ತಿದ ಭಾವುಕ, ಕನ್ನಡದ ಚಿತ್ರಸಂತೆಯಲ್ಲಿ ನಿಂತ ಕಬೀರ, ಒಟ್ಟಿನಲ್ಲಿ ನಮ್ಮೆಲ್ಲರ ಮುದ್ದಿನ ಕಣ್ಮಣಿ. ಲಾಂಗ್ ಹಿಡಿಯುವುದರಲ್ಲಿ ಶಿವಣ್ಣ ಅವರದ್ದೇ “ಎತ್ತಿದ ಕೈ” ಆದರೂ, ಅವರು ಕೇವಲ ಮಚ್ಚಿನ ಚಿತ್ರಗಳನ್ನು ಮಾಡಿಲ್ಲ, ಚಿತ್ರರಸಿಕರ ಅನೇಕ ಅಚ್ಚುಮೆಚ್ಚಿನ ಚಿತ್ರಗಳ ಮೂಲಕ ಹುಚ್ಚು ಹಿಡಿಸಿದ ನಟ ಶಿವಣ್ಣ.
ಇವತ್ತು ಒಬ್ಬ ಸೂಪರ್ ಸ್ಟಾರ್ ಆಗಿ, ಶಿವಣ್ಣ ಅನೇಕ ಜಾಹೀರಾತುಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರಬಹುದು. ಆದರೆ ನಿಜಕ್ಕೂ ಶಿವಣ್ಣ ಅನ್ನೋದೇ ಒಂದು ಬ್ರ್ಯಾಂಡ್. ಹಾಗಾಗಿಯೇ, ಅಂಬಾಸಿಡರ್ ಕಾರಿನ ಕಾಲದಿಂದ ಹೀರೋ ಆಗಿ, ಈಗ ಬೆಂಝ್ ಕಾರಿನ ಲೆವೆಲ್ಲನ್ನೂ ಮೀರಿ ಬೆಳೆದಿರುವ ಶಿವಣ್ಣ ಅವರನ್ನು ನೋಡಿ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಮತ್ತು ಅಭಿಮಾನಿಗಳು, ಶಿವನಾಮವೇ ಚೆಂದ, ಅದ ನಂಬಿಕೋ ಕಂದ ಎನ್ನುತ್ತಿದ್ದಾರೆ. ಇಂಥ ಲೆಜೆಂಡ್ ಶಿವಣ್ಣ ಈಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅವರಿಗೆ ನಮ್ಮೆಲ್ಲರ ಪ್ರೀತಿಯ ಶುಭ ಹಾರೈಕೆಗಳು.
Be the first to comment