ದಿಲೀಪ್ ರಾಜ್ ನಟನೆಯ ‘ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಚಿತ್ರತಂಡದ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿ ಕೇಸ್ ದಾಖಲಿಸಿದೆ.
‘ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಸಿನಿಮಾ ಇಂದು ರಿಲೀಸ್ ಆಗಿದೆ. ಸಿನಿಮಾ ಶೂಟಿಂಗ್ಗೆ ಬಸ್ ಬಾಡಿಗೆ ಪಡೆದು ಸಂಸ್ಥೆಯ ವಿರುದ್ಧ ಚಿತ್ರಣ ಮಾಡಿರುವ ಆರೋಪ ಕೇಳಿ ಬಂದಿದೆ. ವಿಡಿಯೋದಲ್ಲಿ ಬಿಎಂಟಿಸಿ ಬಸ್ನಿಂದ ಆಕ್ಸಿಡೆಂಟ್ ಆಗ್ತಿದೆ ಎಂದು ಸಿನಿಮಾ ತಂಡ ಅಪಪ್ರಚಾರ ಮಾಡಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರೋಪಿಸಿದೆ. ಶ್ರೀ ಗುರುಪ್ರಸಾದ್ ಜಿಎನ್ ಪಿಚ್ಚರ್ ಶಾಪ್ ಹಾಗೂ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದರ ವಿರುದ್ಧ ದೂರು ನೀಡಲಾಗಿದೆ.
ಬನಶಂಕರಿ ಡಿಪೋ-20ಕ್ಕೆ ಸೇರಿದ KA-57F4274 ಬಸ್ ಸಿನಿಮಾ ಶೂಟಿಂಗ್ಗಾಗಿ ಪಡೆದುಕೊಂಡಿದ್ದರು. ಬಸ್ಸಿನ ಹಿಂಭಾಗದಲ್ಲಿ ಸಿನಿಮಾ ತಂಡ ಪೋಸ್ಟರ್ ಅಂಟಿಸಿದೆ. ಆ ಪೋಸ್ಟರ್ ನೋಡಿಕೊಂಡು ಬಂದು ವಾಹನ ಸವಾರರು ಡಿಕ್ಕಿ ಹೊಡೆಯುತ್ತಿದ್ದಾರೆ ಎಂಬ ಸಂದೇಶವುಳ್ಳ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡ ಹಂಚಿಕೊಂಡಿದೆ. ಬಸ್ ಹಿಂಭಾಗದಲ್ಲಿ ಕಾರು ಚಾಲಕ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದ ರೀತಿಯಲ್ಲಿ ನಂತರ ಬಿಎಂಟಿಸಿ ಡ್ರೈವರ್ಗೆ ಕಾರು ಚಾಲಕ ಕೊರಳಪಟ್ಟಿ ಹಿಡಿದು ಎಳೆದಾಡುತ್ತಿರುವ ರೀತಿಯಲ್ಲಿ ವಿಡಿಯೋ ಮಾಡಲಾಗಿದೆ.
ಬಿಎಂಟಿಸಿ ಬೆಂಗಳೂರು ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿದೆ. ಪೋಸ್ಟರ್ ನೋಡಿಕೊಂಡು ಬಂದು ಪ್ರತಿದಿನ ವಾಹನ ಸವಾರರು ಡಿಕ್ಕಿ ಹೊಡೆಯುತ್ತಿದ್ದಾರೆ ಎಂದು ಚಿತ್ರತಂಡ ಜನರಿಗೆ ತಪ್ಪು ಮಾಹಿತಿ ನೀಡಿದೆ. ಜಾಹೀರಾತುಗಳಿಂದ ಯಾವುದೇ ಆ್ಯಕ್ಸಿಡೆಂಟ್ ಆಗಿರುವ ಪ್ರಕರಣಗಳು ದಾಖಲಾಗಿಲ್ಲ. ಈ ಚಿತ್ರವು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ವಿಡಿಯೋದಿಂದ ಸಾರ್ವಜನಿಕರಲ್ಲಿ ಬಿಎಂಟಿಸಿ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದೆ. ವಿಡಿಯೋ ತುಣಕನ್ನು ತಕ್ಷಣವೇ ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಬೇಕು ಎಂದು ಬಿಎಂಟಿಸಿ ಆಗ್ರಹಿಸಿದೆ.
Be the first to comment