ಇಪ್ಪತ್ತಕ್ಕೂ ಅಧಿಕ ಸಮಾನ ಮನಸ್ಕರು ಆರಂಭಿಸಿರುವ “ಇನಿಫಿನಿಟಿ ಕ್ರಿಯೇಷನ್ಸ್” ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, “ಅಪ್ಪು ಪಪ್ಪು”, “ಮಸ್ತ್ ಮಜಾ ಮಾಡಿ”, “ನಂದ” ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್ ಅನಂತರಾಜು ನಿರ್ದೇಶನದ ಹಾಗೂ “ರಂಬಾ” ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕರಾಗಿ ನಟಿಸಿರುವ ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿರುವ “ಕ್ಯಾಪಿಟಲ್ ಸಿಟಿ” ಚಿತ್ರದ ಹಾಡುಗಳನ್ನು ಜಯನಗರ ವಿಧಾನಸಭಾ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಬಿ.ಜೆ.ಪಿ ಮುಖಂಡರಾದ ರೇಣುಕಾಚಾರ್ಯ ಅನಾವರಣ ಮಾಡಿದರು. ಶಿವಗಂಗೆಯ ಶ್ರೀಮಲಯ ಶಾಂತಮುನಿ ಸ್ವಾಮಿಗಳು ಹಾಗೂ ಶ್ರೀ ಆದಿತ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ಶಿಲ್ಪ ಶ್ರೀನಿವಾಸ್, ಡಿ.ಕೆ.ರಾಮಕೃಷ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವಾನಾಥ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇನಿಫಿನಿಟಿ ಕ್ರಿಯೇಷನ್ಸ್ ಲಾಂಛನದಲ್ಲಿ ಇಪ್ಪತ್ತು ನಿರ್ಮಾಪಕರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಇದೊಂದು ಬೆಂಗಳೂರು ಭೂಗತ ಜಗತ್ತಿನ ಸುತ್ತ ನಡೆಯುವ ಕಥೆ. ತೊಂದರೆಗೀಡಾದ ನಾಯಕ ಹೇಗೆ ತನ್ನ ಕಷ್ಟವನ್ನು ನಿಭಾಯಿಸಿಕೊಂಡು ಬರುತ್ತಾನೆ ಎನ್ನುವುದೇ ಪ್ರಮುಖ ಕಥಾಹಂದರ. ಆಕ್ಷನ್ ಚಿತ್ರ ಎನಿಸಿದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿದ್ದು, ಪ್ರೇರಣ ಈ ಚಿತ್ರದ ನಾಯಕಿ, ರವಿಶಂಕರ್, ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್ ಮುಂತಾದ ಹಿರಿಯ ನಟರು ಈ ಚಿತ್ರದಲ್ಲಿದ್ದಾರೆ. ಚಿತ್ರದ ಕೆಲವು ನಿರ್ಮಾಪಕರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, 2025 ರ ಜನವರಿ ಅಂತ್ಯಕ್ಕೆ ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ ಎಂದು ನಿರ್ದೇಶಕ ಅನಂತರಾಜು ತಿಳಿಸಿದರು.
ಇದೊಂದು ರಿವೆಂಜ್ ಸ್ಟೋರಿ. ನಿಮಗೆ ತೊಂದರೆಯಾದಾಗ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳುತ್ತೀರಾ ಎಂಬುದನ್ನು ಈ ಚಿತ್ರದಲ್ಲಿ ನಿರ್ದೇಶಕರು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ನಾಯಕ ರಾಜೀವ್ ರೆಡ್ಡಿ ಹೇಳಿದರು.
ನಾಯಕಿ ಪ್ರೇರಣ, ನಿರ್ಮಾಪಕರಾದ ಮಂಜುನಾಥ್, ಕರ್ನಲ್ ರಾಜೇಂದ್ರ, ಶಿವಪ್ಪ ಕುಡ್ಲೂರು, ಆಂಟೋನಿ ರಾಜ್, ಕೃಷ್ಣಮೂರ್ತಿ ಹಾಗೂ ಸಂಗೀತ ನಿರ್ದೇಶಕ ನಾಗ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು.
Be the first to comment