ಮುಸ್ಲಿಂ ಸಮುದಾಯದ ಮಹಿಳೆಯರು ಸೇರಿದಂತೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡವರ ಚಿತ್ರಗಳನ್ನು ದುರ್ಬಳಕೆ ಮಾಡುವ ಮೂಲಕ ಬುಲ್ಲಿ ಬಾಯಿ ಅಪ್ಲಿಕೇಶನ್ ಸದ್ದು ಮಾಡುತ್ತಿದೆ. ಕೊನೆಗೂ ಈ ಜಾಡು ಬೇಧಿಸಲು ಪೊಲೀಸರು ಕಾರ್ಯತಂತ್ರ ರೂಪಿಸಿದ್ದಾರೆ.
ಬುಲ್ಲಿ ಬಾಯಿ ಅಪ್ಲಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಯುವಕ ವಿಶಾಲ್ ನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೇ ಉತ್ತರಾಖಂಡದ ಮಹಿಳೆಯನ್ನು ಸಹ ಬಂಧಿಸಲಾಗಿದೆ. ಪ್ರಕರಣದ ಆರೋಪಿ ವಿಶಾಲ್ ನನ್ನು ಜನವರಿ 10 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದ ಜಾಲ ಪತ್ತೆ ಹಚ್ಚಲು ಪೊಲೀಸರು ಹಲವೆಡೆ ದಾಳಿ ನಡೆಸಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಈ ಅಶ್ಲೀಲ ಆಪ್ನಲ್ಲಿ ತಮ್ಮ ಚಿತ್ರಗಳನ್ನು ಕಂಡ ಕೆಲವು ಮುಸ್ಲಿಂ ಮಹಿಳೆಯರಿಂದಾಗಿ ಬುಲ್ಲಿ ಬಾಯಿ ಆಪ್ ವಿವಾದ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿದೆ. ಗಿಟ್ಹಬ್ ಎಂಬ ವೇದಿಕೆ, ಈ ಆಪ್ ನ್ನು ರೂಪಿಸಿದೆ. ಇಲ್ಲಿ ಮಹಿಳೆಯರ ಚಿತ್ರಗಳನ್ನು ಬಳಸಲಾಗಿದ್ದು, ಇವುಗಳಲ್ಲಿ ಹೆಚ್ಚಿನ ಚಿತ್ರಗಳನ್ನು ಎಡಿಟ್ ಮಾಡಲಾಗಿದೆ.
ಏನಿದು ವಿವಾದ?:
ಬುಲ್ಲಿ ಬಾಯಿ ಅಪ್ಲಿಕೇಶನ್ ನಲ್ಲಿ ಟ್ವಿಟರ್, ಇತರ ಸಾಮಾಜಿಕ ಜಾಲತಾಣಗಳ ಪ್ಲಾಟ್ಫಾರ್ಮ್ಗಳಿಂದ ಕದ್ದ ಅನೇಕ ಮಹಿಳೆಯರ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ಅಪ್ಲಿಕೇಶನ್ ಮೂಲಕ ಮಹಿಳೆಯರ ಆನ್ಲೈನ್ ಬಿಡ್ಡಿಂಗ್ ಮಾಡಲಾಗುತ್ತದೆ. ಹೆಸರಾಂತ ಪತ್ರಕರ್ತೆಯರು, ಸಾಮಾಜಿಕ ಕಾರ್ಯಕರ್ತೆಯರು, ವಕೀಲರು ಮುಂತಾದವರು ಈ ಆಪ್ನಲ್ಲಿ ‘ಹರಾಜು’ ಪ್ರಕ್ರಿಯೆಗೆ ಒಳಗಾಗಿದ್ದಾರೆ.
ಬುಲ್ಲಿ ಬಾಯಿ ಅಪ್ಲಿಕೇಶನ್ ನ್ನು ಗಿಟ್ ಹಬ್ ನಿಂದ ಡೌನ್ಲೋಡ್ ಮಾಡಲಾಗಿದೆ. ಗಿಟ್ಹಬ್ ಸಾಫ್ಟ್ವೇರ್ ಕೋಡಿಂಗ್ ಪ್ರೊವೈಡರ್ ಪ್ಲಾಟ್ಫಾರ್ಮ್ ಆಗಿದೆ. ಗಿಟ್ಹಬ್ ಪ್ಲಾಟ್ಫಾರ್ಮ್ ವೆಬ್ಸೈಟ್ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕೋಡಿಂಗ್ ಹೊಂದಿದೆ.
ಈ ಹಿಂದೆ ಬಂದಿತ್ತು ಸುಲ್ಲಿ ಡೀಲ್ಸ್ :
6 ತಿಂಗಳ ಹಿಂದೆ ಗಿಟ್ ಹಬ್ ನಲ್ಲಿ ಸುಲ್ಲಿ ಡೀಲ್ಸ್ ಹೆಸರಿನ ಇದೇ ರೀತಿಯ ಅಪ್ಲಿಕೇಶನ್ ನ್ನು ಪ್ರಾರಂಭಿಸಲಾಗಿತ್ತು. ಈ ಅಪ್ಲಿಕೇಶನ್ ಗೆ ಅನೇಕ ಮಹಿಳೆಯರ ಚಿತ್ರಗಳು ಮತ್ತು ಪ್ರೊಫೈಲ್ಗಳನ್ನು ಪೋಸ್ಟ್ ಮಾಡಲಾಗಿತ್ತು.
ಆಗ ‘ಡೀಲ್ ಆಫ್ ದಿ ಡೇ’ ಎಂದು ತಮ್ಮನ್ನು ಮಾರಾಟ ಮಾಡುತ್ತಿರುವ ಚಿತ್ರವನ್ನು ಪತ್ರಕರ್ತೆಯೊಬ್ಬರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. 2020ರ ಜುಲೈನಲ್ಲಿ ಬೆಳಕಿಗೆ ಬಂದಿದ್ದ ಸುಲ್ಲಿ ಡೀಲ್ಸ್ನಲ್ಲಿ 80ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅವರ ಒಪ್ಪಿಗೆ ಇಲ್ಲದೆ ಬಳಸಲಾಗಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಮಹಿಳೆಯರು ದೂರಿದ್ದಾರೆ.
ಕೆಲ ದಿನಗಳಿಂದ ಬುಲ್ಲಿ ಬಾಯಿ ಆ್ಯಪ್ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಎಬ್ಬಿಸಿದೆ. ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕ್ರಮಕ್ಕೆ ಒತ್ತಾಯಿಸಿ ಪತ್ರವನ್ನೂ ಬರೆದಿದ್ದರು. ಈ ಬಗ್ಗೆ ಕ್ರಮಕ್ಕೆ ಮುಂದಾದ ಮುಂಬೈಯ ಸೈಬರ್ ಸೆಲ್ ಪೊಲೀಸರು ನಂತರ ಎಫ್ಐಆರ್ ದಾಖಲಿಸಿದರು.
ಪೊಲೀಸರ ಪ್ರಕಾರ, ಮುಖ್ಯ ಆರೋಪಿ ಮಹಿಳೆ ಬುಲ್ಲಿ ಬಾಯಿ ಆಪ್ಗೆ ಸಂಬಂಧಿಸಿದ ಮೂರು ಖಾತೆಗಳನ್ನು ನಿಭಾಯಿಸುತ್ತಿದ್ದಳು. ಇನ್ನೊಬ್ಬ ಆರೋಪಿ ವಿಶಾಲ್ ಕುಮಾರ್, ಖಲ್ಸಾ ಸುಪ್ರೀಮಸಿಸ್ಟ್ ಹೆಸರಿನಲ್ಲಿ ಖಾತೆಯೊಂದನ್ನು ತೆರೆದಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಡಿಸೆಂಬರ್ 31ರಂದು ಆರೋಪಿ ಖಾತೆಗಳ ಹೆಸರುಗಳನ್ನು ಸಿಖ್ ಹೆಸರುಗಳನ್ನು ಹೋಲುವಂತೆ ಬದಲಿಸಿದ್ದ ಎಂದು ತಿಳಿದು ಬಂದಿದೆ.
ಬುಲ್ಲಿ ಬಾಯಿ’ ಆಪ್ ಅನ್ನು ಟ್ವಿಟ್ಟರ್ನಲ್ಲಿ ಕೂಡ ಪ್ರಚಾರ ಮಾಡಲಾಗುತ್ತಿತ್ತು. ಈ ಆಪ್ ಮೂಲಕ ಮಹಿಳೆಯರನ್ನು ಬುಕ್ ಮಾಡಲೂ ಅವಕಾಶವಿದೆ. ಈ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಅದನ್ನು ನಿರ್ಬಂಧಿಸದೆ ಇರುವ, ಪೊಲೀಸರಿಗೆ, ಸರ್ಕಾರಕ್ಕೆ ಮಾಹಿತಿ ನೀಡದೆ ಟ್ವಿಟ್ಟರ್ ಸುಮ್ಮನೆ ಇರುವ ಬಗ್ಗೆ ಪೊಲೀಸರು ಟ್ವಿಟ್ಟರ್ಗೆ ನೋಟಿಸ್ ನೀಡಿದ್ದಾರೆ.
ಮುಸ್ಲಿಂ ಸಮುದಾಯದ ಮಹಿಳೆಯರ ತೇಜೋವಧೆ ಮಾಡುವ ಸಲುವಾಗಿ ಉದ್ದೇಶಪೂರ್ವಕವಾಗಿಯೇ ರೂಪುಗೊಂಡಿರುವ ತಂಡ ಇದಾಗಿದೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಇಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಲಾಗುತ್ತಿದೆ ಎಂದು ದೂರಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡರು ಕೂಡಾ ಈ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರನ್ನೇ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
___
Be the first to comment