ಹಿಂದಿಯ ಖ್ಯಾತ ಹಾಸ್ಯ ನಟ ಗೋವಿಂದ ಅವರು ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇನ್ನೂ ಟೈಟಲ್ ಇಡದ ಥ್ರಿಲ್ಲರ್ ಸಿನಿಮಾದಲ್ಲಿ ಗೋವಿಂದ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಿರಣ್ ವಿಶ್ವನಾಥ್ ಅವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ನಿರ್ಮಾಪಕ ನವೀನ್ ಕುಮಾರ್ ಅವರು ಗೋವಿಂದ ಅವರ ಜೊತೆ ಮಾತನಾಡಿದ್ದಾರೆ. ಗೋವಿಂದ ಅವರು ಸಿನಿಮಾ ಬಗ್ಗೆ ಸಹಿ ಮಾಡುವುದು ಮಾತ್ರ ಬಾಕಿ ಇದೆ. ಕೂಡಲೇ ಸಿನಿಮಾದ ಅಧಿಕೃತ ಘೋಷಣೆ ಆಗಲಿದೆ ಎಂದು ನಿರ್ದೇಶಕ ಕಿರಣ್ ವಿಶ್ವನಾಥ್ ಹೇಳಿದ್ದಾರೆ.
ಕೆಂಪೇಗೌಡ ಮತ್ತು ರನ್ನ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ಈಗ ಹೊಸ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇವರು ಊರ್ವಿ, ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಎಡಿಟರ್ ಆಗಿಯೂ ಕೆಲಸ ಮಾಡಿದ್ದರು.
ಗೋವಿಂದ ಅವರು ಡಾ. ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ ಆಗಿದ್ದಾರೆ. ಈ ಹಿಂದೆ ಅವರು ಕಾರ್ಯಕ್ರಮವೊಂದರಲ್ಲಿ ಹರ್ಷಿಕಾ ಪೂಣಚ್ಚ ಜೊತೆ ಎಂದೆಂದೂ ನಿನ್ನನು ಮರೆತು ಹಾಡು ಹಾಡಿ ಗಮನ ಸೆಳೆದಿದ್ದರು.
ಈ ಸಿನಿಮಾದ ಮೂಲಕ ಗೋವಿಂದ ಅವರು ಕನ್ನಡ ಸಿನಿಮಾದಲ್ಲಿ ನಟಿಸಿದ ಬಾಲಿವುಡ್ ನಟ ಎನ್ನುವ ಖ್ಯಾತಿಗೆ ಒಳಗಾಗಲಿದ್ದಾರೆ.
_________

Be the first to comment