ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಬ್ಲಾಂಕ್” ಚಿತ್ರ ಇದೇ ತಿಂಗಳ 25 ರಂದು ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿದೆ.
“ಉತ್ತಮ ಚಿತ್ರ ನಿರ್ಮಾಣ ಮಾಡಿರುವ ಸಂತೋಷವಿದೆ. ಬೇರೆ ಭಾಷೆಗಳಲ್ಲಿ ಮಾತ್ರ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಬರುತ್ತದೆ. ನಮ್ಮಲ್ಲಿ ಬರುವುದಿಲ್ಲ ಎನ್ನುತ್ತಾರೆ. ಆದರೆ ಇತ್ತೀಚೆಗೆ ಕನ್ನಡದಲ್ಲೂ ಸಾಕಷ್ಟು ವಿಭಿನ್ನ ಕಥೆಯುಳ್ಳ ಚಿತ್ರಗಳು ಬರುತ್ತಿದೆ. ನಮ್ಮ ಚಿತ್ರದ ಬಗ್ಗೆ ಹೆಚ್ಚು ಹೊಗಳುವುದಿಲ್ಲ. ಆದರೆ ಯಾರಿಗೂ ನಿರಾಸೆ ಮಾಡದ ಚಿತ್ರ ಅಂತ ಹೇಳುತ್ತೇನೆ. ನಮ್ಮ ನಿರ್ದೇಶಕರ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದು ನಿರ್ಮಾಪಕ ಮಂಜುನಾಥ್ ಪ್ರಸನ್ನ ಹೇಳಿದ್ದಾರೆ.
“ನಮ್ಮ ಚಿತ್ರ ಮೊದಲ ಸಲ ನೋಡದವರಿಗೆ ಸ್ವಲ್ಪ ಅರ್ಥವಾಗುವುದು ಕಷ್ಟ. ನಾಲ್ಕು ಮುಖ್ಯ ಪಾತ್ರಗಳ ಮೂಲಕ ನಮ್ಮ ಚಿತ್ರ ಸಾಗುತ್ತದೆ. ಇದು ಕನಸು ಹಾಗೂ ವಾಸ್ತವಗಳ ನಡುವಿನ ಪಯಣ ಎನ್ನಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ “ಲೂಸಿಯಾ”, ” ಉಳಿದವರು ಕಂಡಂತೆ ” ರೀತಿಯ ಸಿನಿಮಾ ಅನ್ನಬಹುದು. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡಿದ್ದೇನೆ” ಎನ್ನುತ್ತಾರೆ ನಿರ್ದೇಶಕ ಎಸ್.ಜಯ್.
“ನಾನು ಈವರೆಗೂ ಮಾಡಿರದ ಪಾತ್ರವಿದು. ಮೂರು ಶೇಡ್ ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಇದೊಂದು ಅದ್ಭುತ ಚಿತ್ರ ಎನ್ನುವುದಕ್ಕಿಂತ ಪ್ರಯೋಗಾತ್ಮಕ ಚಿತ್ರ. ಪ್ರೇಕ್ಷಕರನ್ನು ಚಿತ್ರ ನೋಡುವಂತೆ ಮಾಡುವ ಸಾಕಷ್ಟು ಅಂಶಗಳು ನಮ್ಮ ಚಿತ್ರದಲ್ಲಿದೆ” ಎಂದು ನಟಿ ಕೃಷಿ ತಾಪಂಡ ಹೇಳಿದರು.
“ನಿರ್ದೇಶಕರು ಹೇಳಿದ ಕಥೆ ನನಗೆ ನಿಜಕ್ಕೂ ಅರ್ಥವಾಗಲಿಲ್ಲ. ಚಿತ್ರದ ನಾಲ್ಕು ಮುಖ್ಯ ಪಾತ್ರಗಳ ಜೊತೆ ನನ್ನ ಪಾತ್ರವಿದೆ. ನಾನು ನಾಲ್ಕು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ” ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಳ್ಳುತ್ತಾರೆ ಪ್ರಶಾಂತ್ ಸಿದ್ದಿ.
ಚಿತ್ರದಲ್ಲಿ ಅಭಿನಯಿಸಿರುವ ರಶ್ ಮಲ್ಲಿಕ್ ಹಾಗೂ ಭರತ್ ಹಾಸನ್ ಸಹ ಪತ್ರಿಕಾಗೋಷ್ಠಿಯಲ್ಲಿ ಅನುಭವ ಹಂಚಿಕೊಂಡರು.
ಮಂಜುನಾಥ್ ಪ್ರಸನ್ನ ಎನ್ ಪಿ ನಿರ್ಮಿಸಿರುವ ಈ ಚಿತ್ರವನ್ನು ಎಸ್.ಜಯ್ ನಿರ್ದೇಶಿಸಿದ್ದಾರೆ. ಜೆ.ಪಿ.ಮ್ಯಾನ್ ಛಾಯಾಗ್ರಹಣ ಹಾಗೂ ಶ್ರೀಶಾಸ್ತ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಕೃಷಿ ತಾಪಂಡ, ಪೂರ್ಣಚಂದ್ರ ಮೈಸೂರು, ಭರತ್ ಹಾಸನ್, ರಶ್ ಮಲ್ಲಿಕ್, ಸಚೀಂದ್ರ ಪ್ರಸಾದ್, ಪ್ರಶಾಂತ್ ಸಿದ್ದಿ ಮುಂತಾದವರು “ಬ್ಲಾಂಕ್” ಚಿತ್ರದಲ್ಲಿ ನಟಿಸಿದ್ದಾರೆ.
___
Be the first to comment