ಚಿತ್ರ : ಬಿಳಿ ಚುಕ್ಕಿ ಹಳ್ಳಿ ಹಕ್ಕಿ
ನಿರ್ದೇಶಕ : ಮಹೇಶ್ ಗೌಡ
ನಿರ್ಮಾಪಕ : ಮಹೇಶ್ ಗೌಡ
ತಾರಾಗಣ : ಮಹೇಶ್ ಗೌಡ, ಕಾಜಲ್ ಕುಂದರ್, ವೀಣಾ ಸುಂದರ್ ಮುಂತಾದವರು.
ರೇಟಿಂಗ್ : 3.5/5
ಸಿನಿಮಾ ಹೀರೋ ಎಂದ ಮೇಲೆ ಆತ ಎಲ್ಲದರಲ್ಲೂ ನಂಬರ್ ಒನ್ ಆಗಿರಬೇಕು ಎನ್ನುವುದು ಕಮರ್ಷಿಯಲ್ ಸಿನಿಮಾ ಲೋಕದ ಅಲಿಖಿತ ನಿಯಮ. ಇಂಥ ಸಂದರ್ಭದಲ್ಲಿ ಮೈಮೇಲಿನ ಬಿಳಿ ಚುಕ್ಕಿಗಳಿಂದಾಗಿ ಎಲ್ಲರಿಂದ ಅವಹೇಳನಕ್ಕೊಳಗಾಗುವ ಯುವಕನ ಕಥೆಯನ್ನೇ ಚಿತ್ರವಾಗಿಸಿದ್ದಾರೆ ಮಹೇಶ್ ಗೌಡ. ಮಹೇಶ್ ಈ ಚಿತ್ರದ ನಿರ್ದೇಶಕ, ನಾಯಕ ಮಾತ್ರವಲ್ಲ, ಸಬ್ಜೆಕ್ಟ್ ಕೂಡ ಆಗಿದ್ದಾರೆ. ತಮ್ಮ ಮೈ ಮೇಲಿನ ಬಿಳಿ ಚುಕ್ಕಿಯನ್ನೇ ಆಧಾರವಾಗಿಸಿ ಚಿತ್ರದ ಕಥೆ ಹೆಣೆದಿದ್ದಾರೆ. ಇದು ನಮ್ಮ ಸಮಾಜದಲ್ಲಿ ಯಾರು ಬೇಕಾದರೂ ಎದುರಿಸಬಹುದಾದ ಸಮಸ್ಯೆ. ಹೀಗಾಗಿಯೇ ಈ ಕಥೆ ಭಾವನಾತ್ಮಕವಾಗಿ ಹೆಚ್ಚು ಜನರನ್ನು ತಲುಪುವ ಸಾಧ್ಯತೆ ಪಡೆದಿದೆ. ಇದರ ಮೊದಲ ಹಂತವಾಗಿ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಲು ತೊಡಗಿದ್ದಾರೆ.
ಬಾಲ್ಯದಲ್ಲಿ ಸಣ್ಣದಾಗಿ ಮೈ ಮೇಲೆ ಬೀಳಲು ಶುರುವಾಗುವ ಬಿಳಿ ಚುಕ್ಕಿ ಮುಂದೆ ಇಡೀ ಮೈಯನ್ನೇ ಆವರಿಸುತ್ತದೆ. ಹೀಗೆ ಎಲ್ಲರ ಪಾಲಿನ ಬಿಳಿಚುಕ್ಕಿಯಾಗಿ ತಮಾಷೆಯ ವಸ್ತುವಾದ ತನಗೆ ಒಂದೊಳ್ಳೆಯ ಹುಡುಗಿ ಜತೆ ಮದುವೆ ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುತ್ತಾನೆ ನಾಯಕ. ಈ ಹಂತದಲ್ಲಿ ತಾಯಿಯ ಒತ್ತಾಯಕ್ಕೆ ಮಣಿದು ಒಬ್ಬಳು ಹುಡುಗಿಯನ್ನು ನೋಡಲು ಹೋಗುತ್ತಾನೆ. ನಾಯಕನ ಕೈ ಮೇಲಿನ ಬಿಳಿ ಚುಕ್ಕಿಯನ್ನು ಆಕೆ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಆದ್ರೆ ಚುಕ್ಕಿಯನ್ನು ಕಂಡ ಬಳಿಕವೇ ತನ್ನ ಒಪ್ಪಿಗೆಯ ಗಟ್ಟಿ ನಿರ್ಧಾರ ಹೊರಗಿಡುತ್ತಾಳೆ. ಆಕೆಯ ಇಂಥದೊಂದು ತೀರ್ಮಾನದ ಹಿಂದಿನ ರಹಸ್ಯ ಏನಿತ್ತು ಎನ್ನುವುದು ಕ್ಲೈಮಾಕ್ಸ್ ನಲ್ಲಿ ರಿವೀಲ್ ಆಗುತ್ತೆ.
ಮೈ ಮೇಲೆ ಬಿಳಿಚುಕ್ಕಿ ಹೊಂದಿರುವ ಶಿವು ಆಗಿ ಮಹೇಶ್ ಗೌಡರು ನಟಿಸಿದ್ದಾರೆ. ನಟನಷ್ಟೇ ಅಲ್ಲ ನಿರ್ದೇಶಕರೂ ಅವರೇ. ತಮ್ಮ ನಟನೆ ಮತ್ತು ನಿರ್ದೇಶನದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶಾತ್ಮಕ ಚಿತ್ರವನ್ನು ನೀಡಿದ್ದಾರೆ. ಹೊರಗಿನ ಸೌಂದರ್ಯಕ್ಕಿಂತ ಅಂತರಂಗದ ಒಳ್ಳೆಯತನ ಮುಖ್ಯ ಎಂದು ಸಾರಿದ್ದಾರೆ. ನಾಯಕಿಯಾಗಿ ಕಾಜಲ್ ಕುಂದರ್ ನಟನೆ ಅಮೋಘ. ಕವಿತಾ ಪಾತ್ರದಲ್ಲಿ ಕಣ್ಣಲ್ಲೇ ಕಥೆ ಬರೆದಿದ್ದಾರೆ. ಕವಿತಾ ತಂದೆಯಾಗಿ ರವಿಭಟ್ ಮತ್ತು ತಾಯಿಯಾಗಿ ವೀಣಾ ಸುಂದರ್ ನೈಜ ನಟನೆಯ ಸಾಥ್ ನೀಡಿದ್ದಾರೆ. ಶಿವು ತಾಯಿಯಾಗಿ ಲಕ್ಷ್ಮೀ ಸಿದ್ದಯ್ಯ ಮತ್ತು ಶಿವು ತಾಯಿಯ ಸಹೋದರನಾಗಿ ಜಹಾಂಗೀರ್ ನಟನೆ ಕೂಡ ಮನಕ್ಕೆ ನಾಟುವಂತಿದೆ.
ಮನಸೂರೆಗೊಳ್ಳುವ ಸಂಗೀತ, ದೃಶ್ಯಕ್ಕೆ ಸಹಜತೆ ತುಂಬುವ ಛಾಯಾಗ್ರಹಣ ಈ ಸಿನಿಮಾದ ಹೈಲೈಟ್. ಮೊದಲ ಪ್ರಯತ್ನದಲ್ಲೇ ಇಂಥದೊಂದು ವಿಶೇಷ ಚಿತ್ರ ನೀಡಿ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಮಹೇಶ್ ಗೌಡ ಗೆದ್ದಿದ್ದಾರೆ.





Be the first to comment