ಬಿಗ್ ಬಾಸ್ ಖ್ಯಾತಿಯ ನಟ ರಾಜೀವ್ ನಾಯಕರಾಗಿ ನಟಿಸಿರುವ “ಉಸಿರೇ ಉಸಿರೇ” ಚಿತ್ರಕ್ಕಾಗಿ ಪ್ರೇಮಕವಿ ಕೆ.ಕಲ್ಯಾಣ್ ಬರೆದಿರುವ “ಉಸಿರೇ ನನ್ನ ಉಸಿರೇ” ಎಂಬ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ವಿವೇಕ್ ಚಕ್ರವರ್ತಿ ಸಂಗೀತ ನೀಡಿರುವ ಹಾಗೂ ವಾಸುಕಿ ವೈಭವ್ ಹಾಡಿರುವ ಈ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ ಹರೀಶ್ ಹಾಗೂ ಭೀಮ ಜ್ಯುಯಲರ್ಸ್ ನ ಮಾಲೀಕರಾದ ವಿಷ್ಣು ಭಟ್ ಬಿಡುಗಡೆ ಮಾಡಿದರು.
ಇದೊಂದು ನವೀರದ ಪ್ರೇಮಕಥೆ. ಪ್ರೀತಿಗೆ ಜಾತಿಯಿಲ್ಲ ಎಂದು ಸಾರುವ ಕಥೆ ಎಂದು ಮಾತು ಪ್ರಾರಂಭಿಸಿದ ನಾಯಕ ರಾಜೀವ್, “ಉಸಿರೇ ಉಸಿರೇ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ಬಳ್ಳಾರಿಯ ರೇಣುಕಾಂಬ ಜಾತ್ರೆಯಲ್ಲಿ ಹಾಗೂ ಮಂತ್ರಾಲಯದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೆವು. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಎಲ್ಲರೂ ಸಾಮಾನ್ಯವಾಗಿ ಮೊದಲು ಡ್ಯುಯೆಟ್ ಸಾಂಗ್ ಬಿಡುಗಡೆ ಮಾಡುತ್ತಾರೆ. ಆದರೆ ನಾವು ಪ್ಯಾತೋ ಸಾಂಗ್ ಬಿಡುಗಡೆ ಮಾಡಿದ್ದೇವೆ. ಈ ಹಾಡನ್ನು ಮೊದಲು ಬಿಡುಗಡೆ ಮಾಡಲು ಕಾರಣವೆಂದರೆ, ಈ ಹಾಡಿನಲ್ಲಿ ಇಡೀ ಚಿತ್ರದ ಕಥೆಯಿದೆ. ಹಾಡನ್ನು ಗಮನವಿಟ್ಟು ಕೇಳಿದಾಗ ನಮ್ಮ ಚಿತ್ರದ ಕಥೆ ಅರ್ಥವಾಗುತ್ತದೆ. ಈ ಹಾಡನ್ನು ಬಿಡುಗಡೆ ಮಾಡಿಕೊಟ್ಟ ಗುರುಕಿರಣ್, ಭಾ.ಮ.ಹರೀಶ್ ಹಾಗೂ ವಿಷ್ಣು ಭಟ್ ಅವರಿಗೆ ಧನ್ಯವಾದ ತಿಳಿಸಿದರು.
ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಾನು ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ ಅವರೆ ಸ್ಪೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು ಹಾಗೂ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಅವರ ಅಭಿನಯದ ಸನ್ನಿವೇಶಗಳು ಸುಮಾರು 18 ನಿಮಿಷಗಳು ಬರುತ್ತದೆ. ಸುದೀಪ್ ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಪ್ರದೀಪ್ ಯಾದವ್.
ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಸೆಪ್ಟೆಂಬರ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ನಮ್ಮ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಟರಾದ ಡಾ||ಆಲಿ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರು, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗಿನ್ನಿಸ್ ರೆಕಾರ್ಡ್ ಮಾಡಿರುವ ಬ್ರಹ್ಮಾನಂದಂ ಮೊದಲ ಬಾರಿಗೆ ನಮ್ಮ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು, ಜಗಪ್ಪ, ಸುಶ್ಮಿತಾ ಇನ್ನೂ ಮುಂತಾದವರ ತಾರಾಬಳಗವಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಮುಂದೆ ಉಳಿದ ಹಾಡುಗಳು ಹಾಗೂ ಟ್ರೇಲರ್ ಸಹ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಿ.ಎಂ.ವಿಜಯ್ ತಿಳಿಸಿದರು. ನಾಯಕಿ ಶ್ರೀಜಿತ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಕುರಿತು ವಿವೇಕ್ ಚಕ್ರವರ್ತಿ ಮಾಹಿತಿ ನೀಡಿದರು. ನಿರ್ಮಾಪಕರ ತಾಯಿ ಪ್ರಮಿಳಾ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment