BIFFES 2025: ಪಾಸ್ ದರ 800 ರೂ.

16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ  ಮಾರ್ಚ್ 1ರಿಂದ ಆರಂಭವಾಗಲಿದ್ದು, ಪಾಸ್‌ಗೆ ಸಾರ್ವಜನಿಕರಿಗೆ 800 ರೂ.,  ವಿದ್ಯಾರ್ಥಿ, ಹಿರಿಯ ನಾಗರಿಕರು, ಚಿತ್ರೋದ್ಯಮದ ಸದಸ್ಯರಿಗೆ 400 ರೂ. ಶುಲ್ಕವಿರಲಿದೆ.

ಚಿತ್ರೋತ್ಸವದ ಜಾಲತಾಣದ ಮೂಲಕ ನೋಂದಾಯಿಸಿಕೊಳ್ಳಬಹುದು.  ರಾಜಾಜಿನಗರದ ಓರಾಯನ್ ಮಾಲ್‍ನ 11 ಸ್ಕ್ರೀನ್‍ಗಳಲ್ಲಿ ಸಾರ್ವಜನಿಕರಿಗೆ ಸಿನಿಮಾಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಚಿತ್ರೋತ್ಸವವು 7 ದಿನಗಳ ಕಾಲ ನಡೆಯಲಿದೆ. ಸಿನಿಮಾ ಆಸಕ್ತರು ಪಾಸ್‌ ಪಡೆದುಕೊಂಡು ಚಲನಚಿತ್ರೋತ್ಸವದಲ್ಲಿ ಭಾಗಿಯಾಗಬಹುದು.

‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಡಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಮಾರ್ಚ್ 1 ರ ಸಂಜೆ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಚಿತ್ರೋತ್ಸವದಲ್ಲಿ ಸುಮಾರು 60 ದೇಶಗಳಿಂದ 200ಕ್ಕೂ ಹೆಚ್ಚು ಚಲನಚಿತ್ರ  ಪ್ರದರ್ಶನ ಕಾಣಲಿವೆ.

ಮಾ.8ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಚಲನಚಿತ್ರೋತ್ಸವದಲ್ಲಿ ಏಷಿಯನ್, ಇಂಡಿಯನ್ ಹಾಗೂ ಕನ್ನಡ ಚಲನಚಿತ್ರಗಳ ಸ್ಫರ್ಧಾ ವಿಭಾಗಗಳಿವೆ. ಮೂರು ವಿಭಾಗಗಳಲ್ಲಿ ತಲಾ ಮೂರು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಚಿತ್ರೋತ್ಸವದಲ್ಲಿ ಎಐ ಕುರಿತ ವಿಶೇಷ ಕಾರ್ಯಾಗಾರ ಮಾ.3ರಂದು ನಡೆಯಲಿದೆ.  ಹಿಂದಿನ ಕಾಲದಲ್ಲಿ ಇದ್ದ ಟೆಂಟ್ ಸಿನಿಮಾ ರೀತಿಯಲ್ಲಿ ಕೆಲ ಸಿನಿಮಾ ಪ್ರದರ್ಶನಗೊಳ್ಳಲಿವೆ.

ಒಟಿಟಿ, 2024ರ ಹಿಟ್ ಚಿತ್ರಗಳ ನಿರ್ದೇಶಕರೊಂದಿಗೆ ಸಂವಾದ, ಚಿತ್ರರಂಗದ ಸಾಧಕರೊಂದಿಗೆ ಮಾತುಕತೆ, ಚಿತ್ರ ವಿತರಣೆ, ನಿರ್ಮಾಣದ ಸವಾಲುಗಳ ಕುರಿತು ಉಪನ್ಯಾಸ ನಡೆಯಲಿದೆ. 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿಯಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!