ಚಿತ್ರ: ಭುವನಂ ಗಗನಂ
ನಿರ್ದೇಶನ: ಗಿರೀಶ್ ಮೂಲಮನಿ
ತಾರಾಗಣ: ಪೃಥ್ವಿ ಅಂಬಾರ್, ಪ್ರಮೋದ್, ರಚೆಲ್ ಮೊದಲಾದವರು
ನಿರ್ಮಾಣ: ಮುನೇಗೌಡ
ರೇಟಿಂಗ್: 4/5
ಇದು ಒಂದು ಪಯಣದಿಂದ ಶುರುವಾಗುವ ಕತೆ. ಪಯಣದಲ್ಲೇ ಮುಗಿಯುತ್ತದೆ. ಆದರೆ ಈ ಪ್ರಯಾಣದಲ್ಲಿ ಇಬ್ಬರ ಜೀವನ ಯಾನದ ಅನಾವರಣವಾಗುತ್ತದೆ.
ಕನ್ಯಾಕುಮಾರಿಗೆ ಕಾರಲ್ಲಿ ಒಂಟಿಯಾಗಿ ಹೊರಟಾತ ಅಭಿ. ಈತನೊಡನೆ ಅಪರಿಚಿತ ಪ್ರಯಾಣಿಕನಾಗಿ ಸಾಥ್ ನೀಡುವವನೇ ರಾಮ್. ರಾಮ್ ವಿಶೇಷ ಚೇತನ ವ್ಯಕ್ತಿ. ಈತನಲ್ಲಿ ಅಭಿ ತನ್ನ ವೈಯಕ್ತಿಕ ವಿಚಾರ ಹಂಚಿಕೊಳ್ಳುತ್ತಾನೆ. ತಾನು ಕಾಲೇಜ್ ನಲ್ಲಿ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿದ್ದು, ಈಗ ಅವಳ ಭೇಟಿಗೆ ಕನ್ಯಾಕುಮಾರಿಗೆ ಹೊರಟ ಕತೆಯನ್ನು ಬಿಡಿಸಿಡುತ್ತಾನೆ. ಅಲ್ಲಿಗೆ ಚಿತ್ರ ಮಧ್ಯಂತರ ತಲುಪುತ್ತದೆ. ಮತ್ತೊಂದೆಡೆ ರಾಮ್ ತನ್ನ ತಾಯಿಯ ಭೇಟಿಗೆಂದು ಕನ್ಯಾಕುಮಾರಿಗೆ ಹೊರಟ ಕತೆ ಹೇಳುತ್ತಾನೆ.
ಇಬ್ಬರ ಭೇಟಿಯ ಉದ್ದೇಶ ಏನು? ಈ ಪಯಣದಲ್ಲಿ ಯಾಕೆ ಇಬ್ಬರೂ ಒಂಟಿಯಾಗಿರುತ್ತಾರೆ? ಕೊನೆಗೆ ಈ ಪ್ರಯಾಣದ ಉದ್ದೇಶ ಈಡೇರುತ್ತಾ? ಎನ್ನುವುದೇ ಕತೆಯ ಸಾರ.
ಭುವನಂ ಗಗನಂ ಎನ್ನುವ ಹೆಸರಿಗೆ ತಕ್ಕಂತೆ ಇವರಿಬ್ಬರ ಸ್ವಭಾವದಲ್ಲಿ ಭಾನು, ಭುವಿಯ ಅಂತರ. ಇಲ್ಲಿ ರಾಮ್ ಪಾತ್ರದಲ್ಲಿ ಪೃಥ್ವಿ ಅಂಬಾರ್ ಅಭೂತಪೂರ್ವ ಎನ್ನುವಂತೆ ನಟಿಸಿದ್ದಾರೆ. ಅಭಿಯಾಗಿ ಪ್ರಮೋದ್ ಎಂದಿನಂತೆ ಖಡಕ್ ವ್ಯಕ್ತಿತ್ವದ ಹುಡುಗ. ಅಭಿಗೆ ಜೋಡಿಯಾಗಿ ರಚೆಲ್ ನಟನೆ ಆಕರ್ಷಕ. ನವನಟಿ ಪೊನ್ನು ಅಶ್ವತಿ ಕೂಡ ಗಮನ ಸೆಳೆಯುತ್ತಾರೆ.
ಚಿತ್ರದ ಛಾಯಾಗ್ರಹಣ ಮನಸೆಳೆಯುತ್ತದೆ. ಸಂಗೀತ ಕೂಡ ತಾಳಹಾಕುವಂತಿದೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಮೊದಲಾದವರ ನಟನೆ ಕೂಡ ಮರೆಯುವಂತಿಲ್ಲ. ಪ್ರತಿಯೊಂದು ಅಂಶಗಳು ಕೂಡ ಮೆಚ್ಚುವಂತಿರುವ ಈ ಸಿನಿಮಾ ಪ್ರೇಮಿಗಳ ಪಾಲಿಗೆ ರಸದೂಟ ಆಗುವುದರಲ್ಲಿ ಸಂದೇಹವಿಲ್ಲ.

Be the first to comment