ದುನಿಯಾ ವಿಜಯ್ ನಟನೆಯ 28ನೇ ಸಿನಿಮಾ, ನಿರ್ದೇಶನದ ಎರಡನೇ ಚಿತ್ರದ ” ಭೀಮ” ದ ಮುಹೂರ್ತ ಏಪ್ರಿಲ್ 18ರಂದು ಬೆಳಗ್ಗೆ 9.30 ಗಂಟೆಗೆ ಬಂಡಿ ಮಕಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ.
ಈ ಸಿನಿಮಾವನ್ನು ಶಿವಣ್ಣ ನಟಿಸುತ್ತಿರುವ ‘ಬೈರಾಗಿ’ ಸಿನಿಮಾದ ನಿರ್ಮಾಪಕ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದಂತೆ ರಕ್ತ ಕಲೆಗಳಾಗಿರುವ ಕೈ, ಯಮಹ ಆರ್ ಎಕ್ಸ್ 100 ಬೈಕ್ ಇರುವ ಅನೌನ್ಸ್‌ಮೆಂಟ್ ಪೋಸ್ಟರ್ ರಿಲೀಸ್ ಈ ಹಿಂದೆ ಆಗಿತ್ತು.
‘ಸಲಗ’ ಬಳಿಕ ದುನಿಯಾ ವಿಜಯ್‌ಗೆ ಆಫರ್ ಸಾಕಷ್ಟು ಹೆಚ್ಚಾಗಿವೆ. ಈ ನಡುವೆ ದುನಿಯಾ ವಿಜಯ್ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ್ದು, ಬಾಲಕೃಷ್ಣ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಸಲಗ’ ಗೆದ್ದ ಬಳಿಕ ದುನಿಯಾ ವಿಜಯ್ ಮತ್ತೆ ನಿರ್ದೇಶನಕ್ಕೆ ಇಳಿಯುತ್ತಾರಾ ಎನ್ನುವ ಪ್ರಶ್ನೆ ಹಲವರನ್ನು ಕಾಡಿದೆ. ಈ ಪ್ರಶ್ನೆಗೆ ಸ್ವತ: ದುನಿಯಾ ವಿಜಯ್ ಕೂಡ ಉತ್ತರಿಸಿದೆ ಮೌನವಾಗಿದ್ದರು. ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ದುನಿಯಾ ವಿಜಯ್ ಈ ಸಿನಿಮಾದಲ್ಲಿ ನಟಿಸುವ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.
ಹೊಸ ಪ್ರಯತ್ನಕ್ಕೆ ಕೈ ಹಾಕಬೇಕಾದ ಅನಿವಾರ್ಯತೆಗೆ ಸಿಲುಕಿದ ದುನಿಯಾ ವಿಜಯ್ ಸಲಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದ ದುನಿಯಾ ವಿಜಯ್ ಚೊಚ್ಚಲ ಪ್ರಯತ್ನದಲ್ಲಿ ಗೆದಿದ್ದರು. ಈಗ ಎರಡನೇ ಬಾರಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವ ವಿಜಯ್ ಕುತೂಹಲ ಮೂಡಿಸಿದ್ದಾರೆ.
ಚಿತ್ರ ಆಕ್ಷನ್ ಓರಿಯಂಟೆಡ್ ಆಗಿರುವ ಸಾಧ್ಯತೆ ಇದ್ದು ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ಹೊಸ ಪಾತ್ರ ಪರಿಚಯ ಆಗಿದ್ದು ಬ್ಲ್ಯಾಕ್ ಡ್ರಾಗನ್ ಮಂಜು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ಆಜಾನುಬಾಹು ಪಾತ್ರಧಾರಿ ಮಂಜು ಬಗ್ಗೆ ಪೋಸ್ಟರ್ ಹಂಚಿಕೊಂಡಿರುವ ದುನಿಯಾ ವಿಜಯ್ ಅವರು, ಮಂಜು ಮೇಲೆ ಆಶೀರ್ವಾದ ಇರಲಿ. ಪರಿಣಿತ ಪಾತ್ರಧಾರಿಯನ್ನು ತೆರೆಯ ಮೇಲೆ ತರಲು ಉತ್ಸುಕ ಆಗಿದ್ದೇನೆ ಎಂದಿದ್ದಾರೆ.
_____

Be the first to comment