ಶಿವಣ್ಣ ನಟನೆಯ ಭಜರಂಗಿ2 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟಿ ಭಾವನಾ ಮೆನನ್ ಅವರು ರಕ್ಷಣ್ ನಿರ್ದೇಶನದ ಮುಂದಿನ ಚಿತ್ರ ಪಿಂಕ್ ನೋಟ್ ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರವು ವಿದೇಶಿ ಉದ್ಯೋಗದ ಆಮಿಷಕ್ಕೆ ಒಳಗಾಗುವ ಮಹಿಳೆಯರ ಜೀವನದ ಕಥೆ ತೆರೆಯ ಮೇಲೆ ಹೇಳಲಿದೆ.
“ಪ್ರತಿಯೊಬ್ಬರಿಗೂ ದುಡ್ಡಿನ ಅವಶ್ಯಕತೆ ಇದೆ. ಅದರ ಹಿಂದೆ ಹೋದಾಗ ಏನಾಗುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳುತ್ತಿದ್ದೇನೆ. ಭಾವನಾ ಅವರಿಗೆ ಕಥೆಯನ್ನು ಮೇಲ್ ಮೂಲಕ ಕಳಿಸಿದ್ದೆ. ಅದನ್ನು ಓದಿದ ಅವರು ಈ ರೀತಿಯ ಪಾತ್ರವನ್ನು ನಾನು ಇದುವರೆಗೂ ಮಾಡಿಲ್ಲ ಎಂದು ಖುಷಿಯಿಂದ ಒಪ್ಪಿಕೊಂಡರು. ದ್ವಿಪಾತ್ರದಲ್ಲಿ ಒಂದು ಪಾತ್ರ ಹೋಮ್ಲಿಯಾಗಿದೆ. ಮತ್ತೊಂದು ಕೊಂಚ ವಿಭಿನ್ನವಾಗಿದೆ” ಎಂದು ನಿರ್ದೇಶಕ ರಕ್ಷಣ್ ಹೇಳಿದ್ದಾರೆ.
ಈ ಸಿನಿಮಾವನ್ನು ದಾವಣಗೆರೆ ಮೂಲದ ರಾಜಕೀಯ ಧುರೀಣ ಆನಂದಪ್ಪ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಶೂಟಿಂಗ್ ಪೂರ್ಣಗೊಂಡಿದೆ.
ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ನೆನಪಿರಲಿ ಪ್ರೇಮ್ ಅವರನ್ನು ಅಂತಿಮಗೊಳಿಸಲಾಗಿದೆ. ಮುಂದಿನ ತಿಂಗಳು ನಡೆಯಲಿರುವ ದುಬೈ ಶೆಡ್ಯೂಲ್ನಲ್ಲಿ ಅವರು ಸೆಟ್ಗೆ ಸೇರಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಈ ಚಿತ್ರಕ್ಕೆ ಸೆಲ್ವಂ ಛಾಯಾಗ್ರಹಣ, ಜಸ್ಸಿ ಗಿಫ್ಟ್ ಸಂಗೀತ ಇದೆ. ನಾಗೇಂದ್ರ ಪ್ರಸಾದ್ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
__
Be the first to comment