ಇಡೀ ಚಿತ್ರೋದ್ಯಮವೇ ಕರೋನಾ ಹಾವಳಿಯಿಂದ ಕಂಗೆಟ್ಟು ಹೋಗಿದೆ. ದಿನ ನಿತ್ಯದ ಜೀವನ ನಡೆಸುವುದಕ್ಕೆ ಪರದಾಡುವ ಸ್ಥಿತಿ ಎದುರಿಸುತ್ತಿರುವ ಕೆಲವು ಪೋಷಕ ಕಲಾವಿದರು ಹಾಗೂ ತಂತ್ರಜ್ಞರಿಗೆ ಹಲವಾರು ಸಂಘ ಸಂಸ್ಥೆಗಳು ಅಭಯ ಹಸ್ತವನ್ನು ನೀಡುತ್ತಿದೆ. ಅದೇ ರೀತಿ ಭರತ್ ಗೌಡ ಚಾರಿಟಬಲ್ ಟ್ರಸ್ಟ್ ಕೂಡ ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಡಾ .ಸಿ.ಎನ್. ಅಶ್ವತ್ಥ್ ನಾರಾಯಣ ಮೂಲಕ ಪೋಷಕ ಕಲಾವಿದರಿಗೆ ಉಚಿತ ಆಹಾರದ ಕಿಟ್ ನೀಡಿದ್ದಾರೆ.
ರೇಸ್‌ಕೋರ್ಸ್ ನಲ್ಲಿರುವ ತಮ್ಮ ಅತಿಥಿ ಗೃಹದಲ್ಲಿ ಪೋಷಕ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ ಡಿ.ಸಿ.ಎಂ ಮಾತನಾಡುತ್ತಾ ಕನ್ನಡ ಚಿತ್ರರಂಗ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಲೇ ಬಂದಿದೆ. ಚಿತ್ರರಂಗದ ಪೋಷಕ ಕಲಾವಿದರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಾಜದ ಎಲ್ಲ ಗಣ್ಯಮಾನ್ಯರು ಮುಂದೆ ಬಂದು ಇವರಿಗೆ ಸಹಾಯ ಮಾಡಬೇಕು, ಈ ಮೂಲಕ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಎತ್ತಿ ಹಿಡಿಯಬೇಕು.
ನಮ್ಮತನವನ್ನು ಕಾಪಾಡಿಕೊಳ್ಳಬೇಕು ಎಂದರೆ ಅದು ಕಲಾವಿದರಿಂದ ಮಾತ್ರವೇ ಸಾಧ್ಯ. ಕಷ್ಟದಲ್ಲಿರುವ ಕಲಾವಿದರಿಗೆ ಚಿತ್ರ ನಿರ್ಮಾಪಕ ಭರತ್‌ಗೌಡ ಹಾಗೂ ನಾಯಕ ನಟ ಕೆಂಪೇಗೌಡ ಅವರು ಆಹಾರದ ಕಿಟ್‌ಗಳನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಆಹಾರದ ಕಿಟ್ ಪಡೆಯುತ್ತಿರುವ ಎಲ್ಲ ಕಲಾವಿದರಿಗೆ ನಾನು ವೈಯಕ್ತಿಕವಾಗಿ ತಲಾ ಒಂದು ಸಾವಿರ ರೂ.ಗಳ ಚೆಕ್ ನೀಡುತ್ತಿದ್ದೇನೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಪ್ರಕಟಿಸಿರುವ ಪ್ಯಾಕೇಜ್‌ನಲ್ಲಿ ಕಲಾವಿದರಿಗೆ ೩ ಸಾವಿರ ರೂ. ಕೊಡುವುದೆಂದು ಘೋಷಣೆ ಮಾಡಲಾಗಿದೆ. ಅದರಲ್ಲಿ ಚಿತ್ರರಂಗದ ಪೋಷಕ ಕಲಾವಿದರೂ ಸೇರಿದ್ದಾರಾ ಇಲ್ಲವಾ ಎಂಬ ಬಗ್ಗೆ ಗೊಂದಲವಿದೆ. ಚಿತ್ರರಂಗದ ಕಲಾವಿದರಿಗೂ ಆ ಹಣ ಸಿಗುವ ಬಗ್ಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕ್ರಮ ವಹಿಸುವ ಬಗ್ಗೆ ಸಂಬಂದಪಟ್ಟವರ ಜೊತೆ ಮಾತನಾಡುತ್ತೇನೆ ಎಂದೂ ಸಹ ಹೇಳಿದರು. ಅಲ್ಲದೆ ಪೋಷಕ ಕಲಾವಿದರನ್ನು ಆದ್ಯತೆಯ ಗುಂಪು ಎಂದು ಪರಿಗಣಿಸಿ ಅವರಿಗೂ ವ್ಯಾಕ್ಸಿನೇಷನ್ ನೀಡಲಾಗುವುದು. ಈ ಬಗ್ಗೆ ಕಲಾವಿದರ ಪಟ್ಟಿ ನೀಡುವಂತೆ ಕೇಳಲಾಗಿದೆ ಎಂದೂ ಹೇಳಿದರು.
ಇದೇ ಸಂದರ್ಭದಲ್ಲಿ ಭರತ್‌ಗೌಡ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಭರತ್‌ಗೌಡ ಮಾತನಾಡುತ್ತ ಕಟ್ಲೆ ಚಿತ್ರವನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ನಾಯಕ ಕಂಪೇಗೌಡ ಮತ್ತು ಗಣೇಶ್‌ರಾವ್ ಕೇಸರಕರ್ ಅವರು ನಮ್ಮ ಕಲಾವಿದರುಗಳು ಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು. ಅದರಂತೆ ಈಗ ಫುಡ್ ಕಿಟ್‌ಗಳನ್ನು ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮೆಡಿಕಲ್ ಕಿಟ್‌ಗಳನ್ನು ವಿತರಿಸಲು ಸಹ ಯೋಜನೆ ಹಾಕಲಾಗಿದೆ. ಈಗಾಗಲೇ ಹಲವಾರು ಮೆಡಿಕಲ್ ಕಿಟ್ ಮತ್ತು ಉಪಯುಕ್ತ ವಸ್ತುಗಳನ್ನ ಟ್ರಸ್ಟ್ ಮೂಲಕ ಕಷ್ಟದಲ್ಲಿರುವವರಿಗೆ ನೀಡಲಾಗಿದೆ ಎಂದು ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ಸುಮಾರು ಹದಿನೆಂಟು ವರ್ಷಕ್ಕೂ ಹೆಚ್ಚು ಕಾಲ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡು ಗಮನ ಸೆಳೆದಂಥ ನಟ ಕೆಂಪೇಗೌಡ. ಸುಮಾರು ಎಂಬತ್ತೊಂಬತ್ತು ಚಿತ್ರದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಈಗ ಪೂರ್ಣಪ್ರಮಾಣದ ನಾಯಕನಾಗಿ 90 ನೇ ಚಿತ್ರವಾದ “ಕಟ್ಲೆ” ಮೂಲಕ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೆಂಪೇಗೌಡ ಮಾತನಾಡುತ್ತಾ ನಿರ್ಮಾಪಕರು ನಮಗೆ ಅವಕಾಶ ನೀಡಿ ಅನ್ನದಾತರಾಗಿದ್ದಾರೆ.
ಅದೇ ರೀತಿ ಈ ಕರೋನಾ ಸಂಕಷ್ಟದ ಸಮಯದಲ್ಲೂ ಕೂಡ ಸಹಾಯ ಹಸ್ತವನ್ನು ಚಾಚಿರುವ ನಮ್ಮ ಚಿತ್ರದ ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು. ಅವರು ನಮ್ಮಂಥ ಹಸಿದ ಕಲಾವಿದರಿಗೆ ಆಹಾರ ನೀಡುತ್ತಿದ್ದು , ಇಂತಹವರಿಂದ ಸಮಾಜದ ಇತರರಿಗೂ ಪ್ರೇರಣೆಯಾಗಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರುಗಳಾದ ಹೊನ್ನವಳ್ಳಿ ಕೃಷ್ಣ, ವೈಜನಾಥ ಬಿರಾದಾರ,ಅಂಜಿನಪ್ಪ ಸೇರಿದಂತೆ ಹಲವಾರು ಪೋಷಕ ಕಲಾವಿದರು ಆಹಾರದ ಕಿಟ್ ಅನ್ನು ಪಡೆದು ನಿರ್ಮಾಪಕ ಔದಾರ್ಯವನ್ನು ಮೆಚ್ಚಿಕೊಂಡರು. ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತವನ್ನು ಚಾಚಿರುವ ನಿರ್ಮಾಪಕ ಭರತ್ ಗೌಡ ರವರ ಈ ಕೆಲಸವನ್ನು ಮೆಚ್ಚಲೇಬೇಕು , ಇದು ಉಳಿದವರಿಗೂ ಮಾದರಿಯಾದರೆ ಒಳ್ಳೆಯದು.
Be the first to comment