ಭಾರತಿ ಟೀಚರ್

ಸಾಕ್ಷರತೆಯ ಜಾಗೃತಿ ಮೂಡಿಸುವ ‘ಭಾರತಿ ಟೀಚರ್ 7ನೇ ತರಗತಿ’

ಚಿತ್ರ: ಭಾರತಿ ಟೀಚರ್ 7ನೇ ತರಗತಿ
ನಿರ್ದೇಶನ: ಎಂ ಎಲ್ ಪ್ರಸನ್ನ
ನಿರ್ಮಾಣ: ರಾಘವೇಂದ್ರ ರೆಡ್ಡಿ
ತಾರಾ ಬಳಗ: ಕುಮಾರಿ ಯಾಶಿಕ, ರೋಹಿತ್ ರಾಘವೇಂದ್ರ, ಸಿಹಿಕಹಿ ಚಂದ್ರು, ಗೋವಿಂದೇಗೌಡ, ಸಂತೋಷ್ ಲಾಡ್, ಆದಿತ್ಯ, ಇತರರು
ರೇಟಿಂಗ್ : 3.5

ಸರ್ಕಾರಿ ಶಾಲೆಗಳನ್ನು ಉಳಿಸುವ ಜೊತೆಗೆ ಕನ್ನಡ ಕಲಿಸಿ, ಉಳಿಸುವ ಸಾಕ್ಷರತೆಯ ಜಾಗೃತಿ ಮೂಡಿಸುವ ಚಿತ್ರ ಈ ವಾರ ತೆರೆಗೆ ಬಂದಿರುವ ‘ಭಾರತಿ ಟೀಚರ್ 7ನೇ ತರಗತಿ’.

ಹುಲಿಗೇರಿಪುರ ಎನ್ನುವ ಅನಕ್ಷರಸ್ಥರು ಹೆಚ್ಚಾಗಿರುವ ಗ್ರಾಮದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಹುಡುಗಿ ಭಾರತಿ ಗ್ರಾಮದ ಜನರು ಅಕ್ಷರಸ್ಥರು ಆಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾಳೆ. ಜಿಲ್ಲಾಧಿಕಾರಿ ಬಾಲಕಿಯ ಮನವಿಗೆ ಸ್ಪಂದಿಸುತ್ತಾರೆ. ಮುಂದೆ ಈ ಹಾದಿಯಲ್ಲಿ ಒಂದಷ್ಟು ಅಡ್ಡಿಗಳು, ಹೋರಾಟಗಳು ನಡೆಯುತ್ತವೆ. ಎಲ್ಲ ಸಮಸ್ಯೆಯನ್ನು ಭಾರತೀ ಎದುರಿಸಿ ಹೇಗೆ ಜಯಶಾಲಿಯಾಗುತ್ತಾಳೆ ಎನ್ನುವುದನ್ನು ನೋಡಲು ಚಿತ್ರವನ್ನು ನೋಡಬೇಕಿದೆ.

ಭಾರತಿ ಪಾತ್ರದಲ್ಲಿ ನಟಿಸಿರುವ ಕುಮಾರಿ ಯಾಶಿಕ ಅವರು ಇಡೀ ಪಾತ್ರವನ್ನು ಅವರಿಸಿದ್ದಾಳೆ. ಬಾಲ ಕಲಾವಿದೆ ಆದರೂ ತನ್ನ ನಟನೆ ಮೂಲಕ ಗಮನ ಸೆಳೆದಿದ್ದಾಳೆ. ವ್ಯವಸ್ಥೆಯ ವಿರುದ್ಧ ಹೋರಾಡುವ ರಾಜಶೇಖರ್ ಪಾತ್ರದಲ್ಲಿ ಯುವ ಪ್ರತಿಭೆ ರೋಹಿತ್ ರಾಘವೇಂದ್ರ ಖಡಕ್ ಆಗಿ ಮಿಂಚಿದ್ದಾರೆ. ಶಿಕ್ಷಕನ ಪಾತ್ರದಲ್ಲಿ ಹಿರಿಯ ನಟ ಸಿಹಿ ಕಹಿ ಚಂದ್ರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಪುಟ್ಟ ಬಾಲಕಿಗೆ ಸ್ಪಂದಿಸುವ ಜಿಲ್ಲಾಧಿಕಾರಿ ಪಾತ್ರದಲ್ಲಿ ಆದಿತ್ಯ ಕಾಣಿಸಿಕೊಂಡಿದ್ದಾರೆ. ಕ್ಲೈಮಾಕ್ಸ್ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂತೋಷ್ ಲಾಡ್ ಅವರು ಸಿಎಂ ಪಾತ್ರ ನಿಭಾಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗುತ್ತಾರೆ.

ಚಿತ್ರದ ಎಲ್ಲಾ ಪಾತ್ರಗಳು ಕಥೆಗೆ ಪೂರಕವಾಗಿದ್ದು, ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ನಿರ್ದೇಶಕ ಎಂ ಎಲ್ ಪ್ರಸನ್ನ ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಸಿನಿಮಾದ ಕಥೆ ಗಮನ ಸೆಳೆಯುತ್ತದೆ.

ಚಿತ್ರದ ಹಾಡುಗಳು ಗುನುಗುವಂತೆ ಇವೆ. ಕನ್ನಡ ನಾಡು, ನುಡಿಯ ಬಗ್ಗೆ ಇರುವ ಹಾಡು ಸೊಗಸಾಗಿ ಮೂಡಿ ಬಂದಿದೆ. ಚಿತ್ರದ ಕ್ಯಾಮರಾ ಕೆಲಸ, ಸಂಕಲನ ಗಮನ ಸೆಳೆಯುತ್ತದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಉತ್ತಮ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ರಾಘವೇಂದ್ರ ರೆಡ್ಡಿ ಅವರನ್ನು ಅಭಿನಂದಿಸಬೇಕಿದೆ.

ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸುವ ಭಾರತಿ ಟೀಚರ್ ಏಳನೇ ತರಗತಿ ಚಿತ್ರವನ್ನು ಎಲ್ಲರೂ ಒಂದು ಬಾರಿ ನೋಡಬಹುದಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!