Bhagawan: ಹಿರಿಯ ನಿರ್ದೇಶಕ ಭಗವಾನ್ ಇನ್ನಿಲ್ಲ

ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ (90) ನಿಧನ ಆಗಿದ್ದು ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಅವರಿಗೆ 90 ವರ್ಷ ವಯಸ್ಸಾಗಿತ್ತು. ಎಸ್.ಕೆ. ಭಗವಾನ್ (ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್) ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಆಗಿ ತಮ್ಮ ಕೆಲಸದ ಮೂಲಕ ಹೆಸರು ಮಾಡಿದ್ದರು.

ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರೊಡನೆ ನಿರ್ದೇಶನದಲ್ಲಿ ಗುರುತಿಸಿಕೊಂಡಿದ್ದ ಭಗವಾನ್, ದೊರೈ-ಭಗವಾನ್ ಎಂದೇ ಪ್ರಸಿದ್ಧ ಆಗಿದ್ದರು. ಇವರಿಬ್ಬರು 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ನೀಡಿದ ಈ ಜೋಡಿ 24 ಕಾದಂಬರಿಗಳನ್ನು ಸಿನೆಮಾಗೆ ಅಳವಡಿಸಿದ್ದರು. ಪ್ರಸ್ತುತ ಭಗವಾನ್ ಅವರು ‘ಆದರ್ಶ ಸಿನೆಮಾ ಇನ್ಸ್ಟಿಟ್ಯೂಟ್‍ನ’ ಪ್ರಾಂಶುಪಾಲರಾಗಿದ್ದರು. ಸಿನೆಮಾ ನಿರ್ದೇಶನದಿಂದ ನಿವೃತ್ತಿ ಹೊಂದಿದ್ದರು.

ಭಗವಾನ್ ಅವರು 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ಸಿನೆಮಾ ಜೀವನ ಆರಂಭಿಸಿದರು. 1966ಲ್ಲಿ ಎಂ.ಸಿ. ನರಸಿಂಹಮೂರ್ತಿಯವರ ಜೊತೆಗೆ ಸಂಧ್ಯಾರಾಗ ಸಿನೆಮಾ ನಿರ್ದೇಶಿಸಿದರು. ನಂತರ ದೊರೈ-ಭಗವಾನ್ ಜೋಡಿ ರಾಜಕುಮಾರ್ ನಾಯಕನಟನಾಗಿರುವ ‘ಜೇಡರ ಬಲೆ’ ಚಿತ್ರವನ್ನು ನಿರ್ದೆಶಿಸಿತು. ಇದು ಕನ್ನಡದಲ್ಲಿ ಜೇಮ್ಸ್ ಬಾಂಡ್‌ ಮಾದರಿಯ ಮೊದಲ ಚಿತ್ರವಾಗಿತ್ತು.

ಮುಂದಿನ ಎಲ್ಲಾ ಚಿತ್ರಗಳನ್ನು ಈ ನಿರ್ದೇಶಕದ್ವಯರು ಜೋಡಿಯಾಗಿ ನಿರ್ದೇಶಿಸಿದರು. ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸಬೆಳಕು’, ‘ಯಾರಿವನು’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ಇವರು ನಿರ್ದೇಶಿಸಿದರು. ಇವರ 30 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದರು.

ದೊರೈರಾಜ್ ಮರಣದ ನಂತರ ಭಗವಾನ್ ನಿರ್ದೇಶನದಿಂದ ನಿವೃತ್ತಿ ಹೊಂದಿದರು. 1992ರ ‘ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರವಾಗಿತ್ತು.

ಚಿತ್ರರಂಗದ ಗಣ್ಯರು ಭಗವಾನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!