ಬೆಂಕಿಯಬಲೆಯಲ್ಲಿ ಗ್ರಾಮೀಣ ಸೊಗಡಿನ ಕಥೆ

ದೊರೆ-ಭಗವಾನ್ ಅವರ ನಿರ್ದೇಶನಲ್ಲಿ ಮೂಡಿಬಂದಿದ್ದ ಚಿತ್ರ ಬೆಂಕಿಯ ಬಲೆ, ಇಂದಿಗೂ ಚಿತ್ರರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಇದೀಗ ಅದೇ ಹೆಸರಿನಲ್ಲಿ ಮೈಸೂರಿನ ಶಿವಾಜಿ ಹೊಸ ಕನ್ನಡ ಸಿನಿಮಾವೊಂದನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸಾಮಾಜಿಕ ಸಂದೇಶ ಹೊಂದಿರುವ ಬೆಂಕಿಯಬಲೆ ಚಿತ್ರದ ಪ್ರೀಮಿಯರ್ ಷೋ ಹಾಗೂ ಪತ್ರಿಕಾಗೋಷ್ಟಿ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು.

ಬೆಂಕಿಯಬಲೆ, ಪ್ರೀತಿಯಕೊಲೆ ಎಂಬ ಟ್ಯಾಗ್ಲೈನ್ ಇರುವ ಚಿತ್ರವಾಗಿದ್ದು, 5 ಹಾಡುಗಳು ಹಾಗೂ 3 ಸಾಹಸ ದೃಷ್ಯಗಳನ್ನು ಒಳಗೊಂಡ ಸಾಂಸಾರಿಕ ಕಥೆಯನ್ನೊಳಗೊಂಡಿದೆ. ಆಘಾತ,ಪರ್ಚಂಡಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಶಿವಾಜಿ ಈ ಚಿತ್ರದ ಮೂಲಕ ನಿರ್ದೇಶಕನೂ ಆಗಿದ್ದಾರೆ. ಜೊತೆಗೆ ಪ್ರಮುಖ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರು, ಬನ್ನೂರು ಸುತ್ತಮುತ್ತ ನಡೆದಿದೆ.

ಗ್ರಾಮೀಣ ಪರಿಸರದಲ್ಲಿ ನಡೆಯುವ ಹಳ್ಳಿ ರಾಜಕೀಯದ ಕಥಾಹಂದರವನ್ನು ಹೊಂದಿದ ಈ ಚಿತ್ರದಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಉತ್ತಮ ಸಂದೇಶವಿದೆ. ಕ್ಯಾನ್ಸರ್ ತಗುಲಿಕೊಂಡ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಹೋರಾಡುವ ವಿದ್ಯಾವಂತ ಯುವತಿಯಾಗಿ ನಟಿ ಪ್ರೀತಿ ಯಶು ಅಭಿನಯಿಸಿದ್ದಾರೆ. ಉಳಿದಂತೆ ನಿರಂಜನ್, ದೇಶಪ್ರೇಮಿ, ಸುಮ, ಪವಿತ್ರ ಮುಂತಾದ ಕಲಾವಿದರು ಈ ಚಿತ್ರದ ಇತರೆ ಪಾತ್ರಗಳಲ್ಲಿದ್ದಾರೆ.

ಬೆಂಕಿಯಬಲೆ ಏಳು ತಿಂಗಳ ಲಾಕ್ಡೌನ್ ನಂತರ ಕಲಾವಿದರ ಸಂಘದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಚಿತ್ರವಾಗಿದೆ. ಶಿವಾಜಿ ಮಾತನಾಡಿ ಚಿತ್ರದಿಂದ ಬರುವ ಹಣವನ್ನು ಕ್ಯಾನ್ಸರ್ ಪೀಡಿತರ ನೆರವಿಗೆ ನೀಡುತ್ತಿರುವುದಾಗಿ ಹೇಳಿದರು. ಅಲ್ಲದೆ ಹದಿನೆಂಟು ವರ್ಷಗಳ ಹಿಂದೆ ನನ್ನ ತಾಯಿ ಕ್ಯಾನ್ಸರ್ ರೋಗದಿಂದಲೇ ನಿನರಾದರು. ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ. ತಮ್ಮವರನ್ನು ಕಳೆದುಕೊಂಡಾಗ ಆಗುವ ನೋವು ಅನುಬವಿಸಿದವರಿಗೆ ಮಾತ್ರ ಗೊತ್ತು. ಸಿನಿಮಾ ಮಾಡಿದರೆ ಹಾಳಾಗಿ ಹೋಗ್ತಾರೆ ಎಂದು ಬಹಳಷ್ಟು ಜನ ಹೇಳ್ತಾರೆ, ಆದರೆ ಒಳ್ಳೇ ಉದ್ದೇಶಕ್ಕಾಗಿ ಚಿತ್ರ ಮಾಡಿದರೆ ಖಂಡಿತ ಒಳಿತಾಗುತ್ತದೆ, ಆದರೆ ಕೆಟ್ಟ ಯೋಚನೆ ಇಟ್ಟುಕೊಂಡು ಇಲ್ಲಿಗೆ ಬರುವವರು ಖಂಡಿತ ಉದ್ದಾರ ಆಗಲ್ಲ.

ನಮ್ಮ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕರು ಈಗ ಚಿತ್ರರಂಗದಲ್ಲಿ ಒಳ್ಳೊಳ್ಳೇ ಅವಕಾಶಗಳನ್ನು ಪಡೆದಿದ್ದಾರೆ. ಅದೇ ನನಗೆ ತೃಪ್ತಿ. ನಮ್ಮ ಚಿತ್ರದ ಓ ವಿಯೇ ಎಂಬ ಮನುಡಿಯವ ಹಾಡು ಯೂ ಟ್ಯೂಬ್ನಲ್ಲಿ ವೈರಲ್ ಆಗಿದೆ ಎಂದು ಹೇಳಿಕೊಂಡರು. ನಂತರ ನಾಯಕಿ ಪ್ರೀತಿ ಯಶು ಮಾತನಾಡಿ ಗಂಡು ದಿಕ್ಕಿಲ್ಲದ ಮನೆಯ ಹೆಣ್ಣು ಮಕ್ಕಳನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ, ಆಕೆ ಕ್ಯಾನ್ಸರ್ನಿಂದ ಬಳಲುತ್ತಿರುವ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಎಷ್ಟೆಲ್ಲ ಹೋರಾಡುತ್ತಾಳೆ ಎಂದು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ ಎಂದು ಹೇಳಿದರು. ಮತ್ತೊಬ್ಬ ನಟಿ ಪವಿತ್ರ ಮಾತನಾಡಿ ನನಗೆ ಸಿನಿಮಾ ಶೂಟಿಂಗ್, ಕ್ಯಾಮೆರಾ ಹೇಗಿರುತ್ತೆ ಅಂತ ಗೊತ್ತಾದದ್ದೇ ಈ ಚಿತ್ರದಿಂದ.ನಿರ್ಮಾಪಕರು ಒಳ್ಳೇ ಉದ್ದೇಶ ಇಟ್ಟುಕೊಂಡು ಚಿತ್ರ ಮಾಡಿದ್ದಾರೆ ಎಂದು ಹೇಳಿದರು.

ನಟ ನಿರಂಜನ್ ಮಾತನಾಡುತ್ತ ನನ್ನದು ಈಗಿನ ಜನರೇಶನ್ಗೆ ಹೊಂದಿಕೊಳ್ಳುವ ಪಾತ್ರ. ನಾನು ಈ ಚಿತ್ರದಲ್ಲಿ ಪಟೇಲರ ಮಗನಾಗಿ ಅಭಿನಯಿಸಿದ್ದೇನೆ ಎಂದು ಹೇಳಿದರು. ಮಂಜುನಾಥ ಮಿರ್ಲೆ, ಶಿವಾಜಿ ಅವರ ಸಹೋದರ ಲೋಕೇಶ್ ಅವರೂ ಈ ಚಿತ್ರದ ಕುರಿತಂತೆ ಮಾತನಾಡಿದರು.

ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಿವಾಜಿ ಈ ಚಿತ್ರದಲ್ಲಿ ಗ್ರಾಮೀಣ ಕುಟುಂಬಗಳ ಹಿನ್ನೆಲೆಯಲ್ಲಿ ನಡೆಯುವ ಕಥಾನಕವನ್ನು ಹೇಳಹೊರಟಿದ್ದಾರೆ. ಊರಿನ ಶ್ರೀಮಂತ ವ್ಯಕ್ತಿ ಸುಂದರೇಗೌಡನ ಪಾತ್ರದಲ್ಲಿ ಶಿವಾಜಿ ಅವರು ಕಾಣಿಸಿಕೊಂಡಿದ್ದಾರೆ. ಶಿವಾಜಿ ಅವರ ಐದನೇ ಚಲನಚಿತ್ರವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!