ಫೆ.29ರಿಂದ 5ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಈ ಬಾರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಂದ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದ ಸಿನಿಮಾಗಳೂ ಸೇರಿದಂತೆ 200ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಫೆಬ್ರವರಿ 29 ರಂದು ವಿಧಾನಸೌಧದ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಾರ್ಚ್ 1ರಿಂದ ರಾಜಾಜಿನಗರದಲಿರುವ ಒರಾಯನ್ ಮಾಲ್ನ 11 ಪರದೆಗಳಲ್ಲಿ ಪ್ರದರ್ಶನ ನಡೆಯಲಿದೆ. ಫೆಬ್ರವರಿ 7ರಂದು ಸಮಾರೋಪ ಸಮಾರಂಭ, ಏಷಿಯನ್, ಭಾರತೀಯ ಹಾಗೂ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಕಾನ್ (ಫ್ರಾನ್ಸ್), ಬರ್ಲಿನ್(ಜರ್ಮನಿ), ಕಾರ್ಲೋ ವಿವಾರಿ(ಜೆಕ್ರಿಪಬ್ಲಿಕ್. ಲೊಕಾರ್ನೊ (ಸ್ವಿಟ್ಸರ್ಲೆಂಡ್), ರಾಟರ್ಡ್ಯಾಮ್ (ನೆದಲ್ಯಾಂಡ್), ಬೂಸಾನ್ (ದಕ್ಷಿಣ ಕೊರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ಭಾರತದ ಹಲವುಭಾಷೆಗಳ ಸಿನಿಮಾಗಳ ಪ್ರದರ್ಶನ ಆಗಲಿದೆ. ಕನ್ನಡ ಉಪಭಾಷೆಗಳಾದ ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ ಅಲ್ಲದೆ, ಈಶಾನ್ಯ ಭಾರತದ ಕರ್ಬಿ, ರಾಬಾ, ಗಾಲೋ ಮತ್ತು ವಾಕೆ ಈ ಭಾಷೆಯ ಸಿನಿಮಾಗಳ ಪ್ರದರ್ಶನ ಆಗಲಿವೆ. ಇರಾನಿನ ನಿರ್ದೇಶಕ ಅಬ್ಬಾಸ್ ಕಿರೋಸ್ತಮಿ ಮತ್ತು ಹಿರಿಯ ನಿರ್ದೇಶಕರಾದ ಮೃಣಾಲ್ಸೇನ್ ಸ್ಮರಣೆ ಇರಲಿದೆ.
ಕನ್ನಡ ಚಲನಚಿತ್ರರಂಗಕ್ಕೆ 90 ವರ್ಷ ತುಂಬಲಿದ್ದು, ಈ ಸಂಭ್ರಮಾಚರಣೆಯನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಚರಿಸಲಾಗುತ್ತಿದೆ. ಕನ್ನಡ ಚಿತ್ರಗಳು ಪ್ರಸ್ತುತ ವಿಶ್ವದ ಎಲ್ಲ ಕಡೆ ಜನಪ್ರಿಯವಾಗುತ್ತಿದ್ದು ಕನ್ನಡ ಚಿತ್ರರಂಗ ನಡೆದು ಬಂದ ದಾರಿ, ಕನ್ನಡದಲ್ಲಿ ಮೈಲುಗಲ್ಲು ಸ್ಥಾಪಿಸಿದ ಚಾರಿತ್ರಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸುವ ವಿಶೇಷ ಚಲನಚಿತ್ರಗಳ ಉತ್ಸವವನ್ನು ಏರ್ಪಡಿಸಲಾಗಿದೆ.
ಕರ್ನಾಟಕ ಎಂದು ನಾಮಕರಣಗೊಂಡ ನೆನಪಿಗೆ ‘ಕರ್ನಾಟಕ 50 ಸುವರ್ಣ ಸಂಭ್ರಮ’ಕಾರ್ಯಕ್ರಮದ ಮೂಲಕ ಕರ್ನಾಟಕದ ಹಿರಿಮೆಯನ್ನು ಸಾರುವ ಕಾರ್ಯಕ್ರಮ ಸಂಯೋಜಿಸಲಾಗಿದೆ.
ಮೃಣಾಲ್ ಸೇನ್ ಅವರನ್ನು ಕುರಿತು ಚಲನಚಿತ್ರ ನಿರ್ದೇಶಕ ಶೇಖರ್ ದಾಸ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರ ಶತಮಾನೋತ್ಸವ ಸ್ಮರಣೆ ಏರ್ಪಡಿಸಲಾಗಿದೆ. ಸಂಗೀತ ಮತ್ತು ವಿಜಯಭಾಸ್ಕರ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವಿದೆ. ಜರ್ಮನಿಯ ಚಲನಚಿತ್ರ ಸಂಕಲನಕಾರ ಕಾಯ್ ಎರ್ಡ್ ಮನ್ ಅವರಿಂದ ಚಲನಚಿತ್ರ ಸಂಕಲನ ಕಾರ್ಯಾಗಾರ ನಡೆಯಲಿದೆ.
ರಂಗಕರ್ಮಿ, ಸಿನಿಮಾತಜ್ಞ, ನಿರ್ದೇಶಕ ಡಾ.ಜಬ್ಬಾರ್ ಪಟೇಲ್ ಅವರಿಂದ ಸಂವಿಧಾನ ಮತ್ತು ಭಾರತೀಯ ಸಿನಿಮಾ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವಿದೆ. ಚಲನಚಿತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಸದುಪಯೋಗ ಕುರಿತಂತೆ ಉಪನ್ಯಾಸ, ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.
ಸಾರ್ವಜನಿಕರಿಗೆ 800 ರೂ, ಚಿತ್ರೋದ್ಯಮದ ಸದಸ್ಯರಿಗೆ 400 ರೂ, ಹಿರಿಯ ನಾಗರಿಕರಿಗೆ 400 ರೂ ಟಿಕೆಟ್ ದರ ನಿಗದಿಪಡಿಸಲಾಗಿದೆ.
Be the first to comment