ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ತನುಜಾ’ ಹೆಸರಿನ ಚಿತ್ರದಲ್ಲಿ ಯಡಿಯೂರಪ್ಪ ಸಿಎಂ ಆಗಿ ಆಕ್ಟಿಂಗ್ ಮಾಡಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಹರೀಶ್ ಹಳ್ಳಿ ನಿರ್ದೇಶನದ ‘ತನುಜಾ’ ಸಿನಿಮಾ ನೈಜ ಘಟನೆಯನ್ನು ಆಧರಿಸಿದೆ. ಲಾಕ್ ಡೌನ್ ವೇಳೆ ನೀಟ್ ಪರೀಕ್ಷೆ ಬರೆಯುವ ದೂರದ ಊರಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ಪರದಾಡುವ ಹುಡುಗಿಯೊಬ್ಬಳ ಕಥೆಯನ್ನು ಸಿನಿಮಾ ಹೊಂದಿದೆ.
‘ತನುಜಾ’ ಸಿನಿಮಾದ ಕಥೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತುಂಬಾ ಇಷ್ಟವಾಗಿದೆ. ಹೀಗಾಗಿಯೇ ಅವರು ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ನಟಿಸಿರುವ ದೃಶ್ಯವನ್ನು ಚಿತ್ರತಂಡ ಸೆರೆ ಹಿಡಿದಿದೆ.
ಈ ಚಿತ್ರದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಸಹ ನಟಿಸಿದ್ದಾರೆ. ಹುಡುಗಿಯ ಸಹಾಯಕ್ಕೆ ಸ್ಪಂದಿಸುವ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಸಚಿವ ಸುಧಾಕರ್ ಅವರನ್ನು ಸಂಪರ್ಕಿಸಿ, ಸಿಎಂ ಯಡಿಯೂರಪ್ಪ ಅವರ ಮೂಲಕ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಸಹಾಯವಾಗುವಂತೆ ಸಹಾಯ ಹಸ್ತ ಚಾಚಿದ್ದರು. ಈ ಘಟನೆ ಈಗ ತೆರೆಯ ಮೇಲೆ ಬರುತ್ತಿದೆ.
ರಾಜಕೀಯ ಕ್ಷೇತ್ರಕ್ಕೆ ಸೇರಿದ ಹಲವರು ಬಣ್ಣ ಹಚ್ಚಿ ಯಶಸ್ಸು ಕಂಡಿದ್ದಾರೆ. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು ಸಿನಿಮಾದಲ್ಲಿ ನಟಿಸಿದ್ದರು. ಈಗ ಯಡಿಯೂರಪ್ಪ ಅವರು ಸಿನಿಮಾದಲ್ಲಿ ನಟಿಸುತ್ತಿರುವುದು ಸಾಕಷ್ಟು ಕುತೂಹಲ ಉಂಟು ಮಾಡಿದೆ.
Be the first to comment