ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 3 ರಿಂದ 13ರವರೆಗೆ ನಡೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಲನಚಿತ್ರೋತ್ಸವದ ಲೋಗೋ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ವೇಳೆ ಬಸವರಾಜ ಬೊಮ್ಮಾಯಿ ಮಾತನಾಡಿ, ”ಅಂತಾರಾಷ್ಟ್ರೀಯ ಸಿನಿಮೋತ್ಸವವು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಇದು ‘ಬ್ರ್ಯಾಂಡ್ ಬೆಂಗಳೂರು’ ನಿರ್ಮಾಣ ಮಾಡಲು ಹೆಚ್ಚು ಸಹಕಾರಿಯಾಗುವ ನಿರೀಕ್ಷೆ ಇದೆ. ವಿಶ್ವದ 45 ಜಾಗತಿಕ ಮಟ್ಟದ ಚಲನಚಿತ್ರೋತ್ಸವಗಳಲ್ಲಿ ಬೆಂಗಳೂರು ಸೇರಿರುವುದು ಹೆಮ್ಮೆಯ ಸಂಗತಿ” ಎಂದು ಸಂತಸ ವ್ಯಕ್ತಪಡಿಸಿದರು.
“ಕನ್ನಡ ಚಲನಚಿತ್ರಗಳು ಹಲವಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದೆ. ಚಿತ್ರೋತ್ಸವದಲ್ಲಿ ಅತ್ಯುತ್ತಮ ಕಲಾತ್ಮಕ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡಿ ಅರ್ಥಪೂರ್ಣ ಚಿತ್ರಗಳಿಗೆ ಹೆಚ್ಚಿನ ಮಹತ್ವ ನೀಡಬೇಕು” ಎಂದು ಸಲಹೆ ನೀಡಿದರು.
“ಫೆಬ್ರವರಿ ತಿಂಗಳ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಮಾರ್ಚ್ ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸಾಮರ್ಥ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವ ವಿಶ್ವಾಸವಿದೆ” ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದರು.
“ಚಿತ್ರೋತ್ಸವವನ್ನು ಒರಾಯನ್ ಮಾಲ್‌ನಲ್ಲಿ ನಡೆಸುವ ಅಥವಾ ಬೇರೆಡೆಗೆ ಸ್ಥಳಾಂತರ ಮಾಡುವ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ” ಎಂದು ಅವರು ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಸುತ್ತಾ ಬರಲಾಗಿದೆ. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಸಿನಿಮೋತ್ಸವವನ್ನು ಮಾರ್ಚ್ ತಿಂಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ.
ಲೋಗೋ ಬಿಡುಗಡೆ ವೇಳೆ ತೋಟಗಾರಿಕಾ ಸಚಿವ ಮುನಿರತ್ನ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಂ, ಸಂಘಟನಾ ಸಮಿತಿ ಸದಸ್ಯರಾದ ಕಲಾವಿದೆ ಸುಧಾರಾಣಿ, ಕಲಾ ನಿರ್ದೇಶಕ ಶಶಿಧರ್ ಅಡಪ, ಕಲಾವಿದೆ ಸೋನುಗೌಡ, ಕಲಾ ನಿರ್ದೇಶಕ ಹೆಚ್.ಎನ್.ನರಹರಿರಾವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆಯುಕ್ತ ಪಿ.ಎಸ್.ಹರ್ಷಾ ಇದ್ದರು.
___
Be the first to comment