ಬರುತ್ತಿದೆ ಭಾರತಿ ವಿಷ್ಣುವರ್ಧನ್ ಅವರ ಸಾಕ್ಷ್ಯಚಿತ್ರ

ಭಾರತಿ ವಿಷ್ಣುವರ್ಧನ್ ಅವರ ಬದುಕನ್ನು ಆಧರಿಸಿದ ಸಾಕ್ಷ್ಯಚಿತ್ರವನ್ನು ಅಳಿಯ ಅನಿರುದ್ಧ ತಯಾರಿಸಿದ್ದು ಭಾರತಿ ಅವರ ಹುಟ್ಟುಹಬ್ಬವಾದ ಆಗಸ್ಟ್ 15ರಂದು ಬಿಡುಗಡೆ ಆಗಿರುವ ಸಾಕ್ಷ್ಯಚಿತ್ರದ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ.

ಸಾಕ್ಷ್ಯಚಿತ್ರದಲ್ಲಿ ಭಾರತಿ ಅವರ ಬದುಕು, ಸಿನಿ ಪಯಣ ಸೇರಿದಂತೆ ಹಲವಾರು ವಿಷಯಗಳ ಮಾಹಿತಿ ಇದೆ. 2 ಗಂಟೆ 31 ನಿಮಿಷದ ಈ ಸಾಕ್ಷ್ಯಚಿತ್ರ ಆಗಸ್ಟ್ 24ರಂದು ಬಿಡುಗಡೆ ಆಗಲಿದೆ. ಗರುಡಾ ಮಾಲ್‌ನಲ್ಲಿ ಸಾಕ್ಷ್ಯಚಿತ್ರದ ಮೊದಲ ಪ್ರದರ್ಶನವನ್ನು ಸಿನಿಗಣ್ಯರು, ಮಾಧ್ಯಮ ಮಿತ್ರರಿಗೆ ಅನಿರುದ್ಧ ಆಯೋಜಿಸಿದ್ದು ಬಳಿಕ ಒಟಿಟಿಯಲ್ಲಿ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಭಾರತಿ ಅವರ ಸಿನಿ ಬದುಕು, ವ್ಯಕ್ತಿತ್ವ, ಸಾಧನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಾಕ್ಷ್ಯಚಿತ್ರದಲ್ಲಿ ಸಮಕಾಲೀನರಾದ ನಟ ಶಿವರಾಂ, ನಿರ್ದೇಶಕ ಭಗವಾನ್, ಮಲಯಾಳಂ ಸ್ಟಾರ್ ನಟ ಮಮ್ಮುಟಿ, ನಟ ಅನಂತ್‌ನಾಗ್, ಹೇಮಾ ಚೌಧರಿ, ಶಿವರಾಜ್ ಕುಮಾರ್ ಸೇರಿದಂತೆ ಹಲವು ತಾರೆಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಮ್ಮ ಸಿನಿ ಜೀವನ, ಜೀವನದ ಏಳು-ಬೀಳುಗಳ ಬಗ್ಗೆ ಭಾರತಿ ಮಾತನಾಡಿದ್ದಾರೆ. ನಟ ಅನಿರುದ್ಧ ಅವರು ಭಾರತಿ ಅವರ ಸಂದರ್ಶನ ಮಾಡಿದ್ದಾರೆ. ಯಾರಿಗೂ ಗೊತ್ತಿಲ್ಲದ ಹಲವು ವಿಷಯಗಳನ್ನು ಸಾಕ್ಷ್ಯಚಿತ್ರದಲ್ಲಿ ಭಾರತಿ ಅವರು ಹಂಚಿಕೊಂಡಿದ್ದಾರೆ.

ಭಾರತಿ ಅವರ ಅಪರೂಪದ ಚಿತ್ರಗಳು, ಅವರು ನಟಿಸಿರುವ ಸಿನಿಮಾಗಳ ವಿಡಿಯೋ ತುಣುಕುಗಳು ಸಾಕ್ಷ್ಯಚಿತ್ರದಲ್ಲಿ ಇರಲಿದೆ. ಭಾರತಿಯ ಅವರ ಮುಂದಿನ ಯೋಜನೆಗಳು ಕೂಡಾ ಸಾಕ್ಷ್ಯಚಿತ್ರದಲ್ಲಿ ತೆರೆದುಕೊಳ್ಳಲಿದೆ.
ಕನ್ನಡದಲ್ಲಿ ನಟಿಯರ ಬಗ್ಗೆ ಸಾಕ್ಷ್ಯಚಿತ್ರಗಳು ಕಡಿಮೆ ಬಂದಿದ್ದು ಇದೊಂದು ಉತ್ತಮ ದಾಖಲೆಯಾಗಿ ಉಳಿಯುವ ನಿರೀಕ್ಷೆ ಹೊಂದಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!