ತೆಲುಗಿನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ಸಿನಿಮಾದ ಒಂದು ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ.
‘ಅಖಂಡ 2’ ಸಿನಿಮಾದ ಒಂದು ದೃಶ್ಯದಲ್ಲಿ ಕನ್ನಡದ ಬಗ್ಗೆ ಹೆಮ್ಮೆಯ ಡೈಲಾಗ್ ಬಾಲಯ್ಯ ಬಾಯಿಂದ ಬರುತ್ತದೆ. ಡಾ.ರಾಜ್ಕುಮಾರ್ ಕುಟುಂಬದೊಂದಿಗೆ ನಂದಮೂರಿ ಬಾಲಕೃಷ್ಣ ಹೊಂದಿರುವ ನಂಟಿನ ಹಿನ್ನೆಲೆ ಈ ಡೈಲಾಗ್ಗಳಿಗೆ ಹೆಚ್ಚಿನ ಗಮನ ಸೆಳೆದಿದೆ. ಚಿತ್ರಮಂದಿರಗಳಲ್ಲಿ ಈ ಸೀನ್ಗೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ವ್ಯಕ್ತವಾಗಿದೆ. ಆದರೆ ಡೈಲಾಗ್ನಲ್ಲಿ ಕನ್ನಡದ ಉಚ್ಚಾರಣೆ ತಪ್ಪಾಗಿರುವುದು ಕೆಲವರ ಆಕ್ಷೇಪಕ್ಕೆ ಕಾರಣವಾಗಿದೆ.
‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ವಾಕ್ಯ ತಪ್ಪಾಗಿ ಉಚ್ಚಾರಣೆಯಾಗಿರುವುದನ್ನು ಟ್ರೋಲಿಗರು ಹಿಡಿದುಕೊಂಡಿದ್ದಾರೆ. ಕನ್ನಡದ ಮೇಲಿರುವ ಪ್ರೀತಿಗೆ ಮೆಚ್ಚುಗೆ ಇದ್ದರೂ, ಸಿನಿಮಾದ ಡಬ್ಬಿಂಗ್ನಲ್ಲಿ ಉಚ್ಚಾರಣೆಯನ್ನು ಸರಿಪಡಿಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬೋಯಪತಿ ಶ್ರೀನು ನಿರ್ದೇಶನದ ‘ಅಖಂಡ 2’ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಮಾಸ್ ಅಬ್ಬರಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2021ರ ಬ್ಲಾಕ್ಬಸ್ಟರ್ ‘ಅಖಂಡ’ ಚಿತ್ರದ ಸೀಕ್ವೆಲ್ ‘ಅಖಂಡ 2’ ಆಗಿದೆ.
‘ಅಖಂಡ 2’ ಚಿತ್ರ ಡಿ.5ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ವಿರುದ್ಧ ಇರುವ ಹಳೆಯ ಕೇಸ್ ಹಿನ್ನೆಲೆ ಮದ್ರಾಸ್ ಹೈಕೋರ್ಟ್ ಚಿತ್ರ ಬಿಡುಗಡೆಯನ್ನು ತಡೆದಿತ್ತು.
—-





Be the first to comment