ಬೆಂಗಳೂರು,ನ.17: ಚಂದನವನದ ಖ್ಯಾತ ನಟ ರಾಘವೇಂದ್ರ ರಾಜಕುಮಾರ್ ಅವರು ‘ಬಾಲ್ಕನಿ ಲ್ಯೂಮಿಯೆರ್ ಫಾಲ್ಕೆ ಕಿರುಚಿತ್ರ ಸ್ಪರ್ಧೆ-2018’ ರ ಡಿಜಿಟಲ್ ಲೋಗೋ ಲಾಂಚ್ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು “ಎಲ್ಲೋ ಹಳ್ಳಿಯಲ್ಲಿದ್ದ ಅಪ್ಪಾಜಿ ( ಡಾ. ರಾಜಕುಮಾರ್) ಇಂದು ರಾಜ್ಯದಲ್ಲೇ ಹೆಸರಾಗಿದ್ದಾರೆ.ಸಿನಿಮಾದಲ್ಲಿ ಅವರಿಗೆ ಸಿಕ್ಕಂಥ ಅವಕಾಶವೇ ಅದಕ್ಕೆ ಕಾರಣವಾಗಿತ್ತು. ಇದೀಗ ಶಾರ್ಟ್ ಫಿಲ್ಮ್ ಅಂತ ಹೊಸ ಅವಕಾಶ ಬಂತು. ಈ ಮೂಲಕ ವಿಶ್ವಮಟ್ಟದಲ್ಲಿ ಹೊಸಬರಿಗೆ ಅವಕಾಶ ಸಿಗಲಿರುವುದು ಖುಷಿಯ ವಿಚಾರ’ ಎಂದು ಶುಭ ಕೋರಿದರು.ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಯುವ ನಿರ್ದೇಶಕ ಎ.ಪಿ ಅರ್ಜುನ್ ಮಾತನಾಡಿ, “ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಆಡುವವರಿಗೆ ಐಪಿಎಲ್ ಸಹಾಯವಾದಂತೆ ಈ ಕಿರುಚಿತ್ರ ಸ್ಪರ್ಧೆ ಆ ಪ್ರತಿಭೆಗಳ ಸಿನಿಮಾ ಬದುಕಿಗೆ ಸಹಾಯವಾಗಲಿದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜೇತರಿಗೆ ಮೂರು ಲಕ್ಷ ! ಸಾಮಾನ್ಯವಾಗಿ ಕಿರುಚಿತ್ರ ಸ್ಪರ್ಧೆಗಳಿಗೆ ಎಂಟ್ರಿ ಫೀಸ್ ಸೇರಿದಂತೆ ಸಾಕಷ್ಟು ಹಣ ಖರ್ಚುಮಾಡಬೇಕಾಗಿರುತ್ತದೆ. ಆದರೆ ಇಲ್ಲಿ ಅಂಥ ಯಾವುದೇ ಶುಲ್ಕಗಳಿಲ್ಲ ಮತ್ತು ವಿಜೇತರಿಗೆ ದೊಡ್ಡ ಮೊತ್ತದ ಸಂಭಾವನೆಯೂ ಇದೆ. ವಿಶ‍್ವ ಮಟ್ಟದ ಕಿರುಚಿತ್ರ ಸ್ಪರ್ಧೆ-2018 ಪ್ರಥಮ ವಿಜೇತಗೆ ಮೂರು ರೂ. ಲಕ್ಷ ಬಹುಮಾನ ಧನ! ದ್ವಿತೀಯ ವಿಜೇತಗೆ 1.5ಲಕ್ಷ, ಹಾಗೂ 8 ತೃತೀಯ ಬಹುಮಾನಗಳು ತಲಾ ರೂ.25 ಸಾವಿರ ನಗದು ಬಹುಮಾನಗಳು.
ಬಾಲ್ಕನಿ ಲ್ಯೂಮಿಯೆರ್ ಕಿರುಚಿತ್ರ ಸ್ಪರ್ಧೆಗೆ ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಚಿತ್ರರಂಗದ ಒಂದಷ್ಟು ಗಣ್ಯರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತೀರ್ಪುಗಾರರಲ್ಲೊಬ್ಬರಾದ ರೂಪಾ ಅಯ್ಯರ್, ” ಕಿರುಚಿತ್ರಗಳಿಗೆ ತೀರ್ಪುಗಾರ್ತಿಯಾಗಿ ಮೊದಲಬಾರಿಗೆ ಕೆಲಸ ಮಾಡಲಿದ್ದೇನೆ. ಆದರೆ ಈ ಹಿಂದೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಜ್ಯೂರಿಯಾದ ಅನುಭವ ಇದೆ “, ಎಂದರು.
” ಆರ್ಥಿಕ ಸೌಲಭ್ಯಗಳ ಕೊರತೆಯಿಂದ ಅವಕಾಶಗಳಿಲ್ಲದೆ ವಂಚಿತರಾದ ಸಿನಿಮಾ ನಿರ್ದೇಶಕರಿಗೆ ನೀಡುವಂಥ ಅವಕಾಶವಾಗಿ ಈ ಸ್ಪರ್ಧೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದು ನನ್ನ ಒಂದು ವರ್ಷದ ಹಿಂದಿನ ಕನಸು. ಪಿಂಕ್ ಅಟಮ್ ಎನ್ನುವ ಸಮಾಜ ಸೇವಾ ಸಂಸ್ಥೆಯ ಪ್ರಾಯೋಜಕತ್ವ ಪಡೆದು ಕಿರುಚಿತ್ರ ಸ್ಪರ್ಧೆಯನ್ನು ನಡೆಸಲಾಗುತ್ತಿದೆ ” ಎಂದು ಬಾಲ್ಕನಿ ಇನ್ಫೊಟೈನ್ ಮೆಂಟ್ ನ ಸಂಸ್ಥಾಪಕ- ಸಿಎಒ ಮೆಲ್ವಿನ್ ಮ್ಯಾಥಿಯಾಸ್ ಈ ಸಂದರ್ಭದಲ್ಲಿ ತಿಳಿಸಿದರು.
Be the first to comment