ಫೆಬ್ರವರಿ 18ರಂದು ವಿಭಿನ್ನ ಕಥೆಯ “ಬಹುಕೃತ ವೇಷಂ” ಚಿತ್ರ ರಾಜ್ಯ ಸೇರಿದಂತೆ ವಿದೇಶದಲ್ಲಿ ಬಿಡುಗಡೆಯಾಗುತ್ತಿದೆ.
“ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಸಿನಿಮಾ ನಮ್ಮದು. ಇದೇ 18ರಂದು ಕರ್ನಾಟಕದ 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ತೆರೆ ಕಾಣುತ್ತಿದೆ. ಅಲ್ಲದೆ ಅಮೆರಿಕಾದಲ್ಲೂ ಇದೇ ದಿನ ಸುಮಾರು 25 ಕ್ಕೂ ಹೆಚ್ಚು ಕಡೆ ನಮ್ಮ ಚಿತ್ರ ಬಿಡುಗಡೆಯಾಗುತ್ತಿರುವುದು ಸಂತಸದ ವಿಷಯ. ನಮ್ಮ ಚಿತ್ರದ ಟ್ರೇಲರ್ ವೀಕ್ಷಿಸಿದ ಅಲ್ಲಿನ ನಿವಾಸಿಯೊಬ್ಬರು ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ ಪ್ರಚಾರದ ಎರಡು ವಾಹನಗಳು ರಾಜ್ಯಾದ್ಯಂತ ಸಂಚರಿಸುತ್ತಿದೆ. ಎಲ್ಲರ ಪ್ರೋತ್ಸಾಹವಿರಲಿ” ಎಂದು ನಾಯಕ ಶಶಿಕಾಂತ್ ಹೇಳಿದ್ದಾರೆ.
“ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬುದರಿಂದ ನಮ್ಮ ಚಿತ್ರದ ಶೀರ್ಷಿಕೆ ತೆಗೆದುಕೊಳ್ಳಲಾಗಿದೆ. ಮನುಷ್ಯ ಹೊಟ್ಟೆಪಾಡಿಗಾಗಿ ನಾನಾ ವೇಷ ಹಾಕುತ್ತಾನೆ. ಇದೇ ಕಥೆಯ ಸಾರಾಂಶ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರ ನೋಡಿದ ಪ್ರೇಕ್ಷಕರಿಗೆ ನಿರಾಸೆ ಖಂಡಿತ ಆಗುವುದಿಲ್ಲ” ಎನ್ನುತ್ತಾರೆ ಬಿಗ್ ಬಾಸ್ ಖ್ಯಾತಿಯ ನಟಿ ವೈಷ್ಣವಿ.
“ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನನ್ನ ಮೊದಲ ಚಿತ್ರಕ್ಕೆ ನೀಡಿದ ಪ್ರೋತ್ಸಾಹವನ್ನು ಈ ಚಿತ್ರದಲ್ಲೂ ಮುಂದುವರೆಸಬೇಕು” ಎಂದು ನಿರ್ದೇಶಕ ಪ್ರಶಾಂತ್ ಕೆ ಯರಂಪಳ್ಳಿ ಹೇಳಿದ್ದಾರೆ.
ಕಥೆ ಬರೆದಿರುವ ಅಧ್ಯಾಯ್ ಸಹ ಸಿನಿಮಾ ಕುರಿತು ಮಾತನಾಡಿದರು.
ಎಸ್ ನಂದ ಹಾಗೂ ಡಿ.ಕೆ ರವಿ ಅವರು ನಿರ್ಮಿಸಿರುವ ಈ ಚಿತ್ರವನ್ನು ಪ್ರಶಾಂತ್ ಕೆ ಯರಂಪಳ್ಳಿ ನಿರ್ದೇಶಿಸಿದ್ದಾರೆ. ಅಧ್ಯಾಯ್ ಕಥೆ ಚಿತ್ರಕಥೆ ಬರೆದಿದ್ದಾರೆ. ಹರ್ಷ ಕುಮಾರ್ ಗೌಡ ಛಾಯಾಗ್ರಹಣ, ವೈಶಾಖ್ ಭಾರ್ಗವ್ ಸಂಗೀತ ನಿರ್ದೇಶನ, ಜ್ಞಾನೇಶ್ ಬಿ ಮಠದ್ ಸಂಕಲನ ಚಿತ್ರಕ್ಕಿದೆ.
____

Be the first to comment