‘ಡಾಲಿ’ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಥಿಯೇಟರ್ ಗಳಲ್ಲಿ ಶೇ.100 ಸೀಟಿನ ಅನುಮತಿ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಚಿತ್ರತಂಡ ಸೆ.24ರಂದು ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸರಕಾರ ಪೂರ್ಣಪ್ರಮಾಣದ ಸೀಟು ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದು ಅನುಮಾನ ಆಗಿರುವ ಕಾರಣ ಚಿತ್ರತಂಡ ರಿಲೀಸ್ ಡೇಟ್ ಮುಂದೂಡುವ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಾಲಿ ಧನಂಜಯ್, “ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಹೊಸ ದಿನಾಂಕ ಶೀಘ್ರದಲ್ಲಿ ಘೋಷಿಸುತ್ತೇವೆ” ಎಂದಿದ್ದಾರೆ. ಶಂಕರ್ ಗುರು ಈ ಚಿತ್ರ ನಿರ್ದೇಶಿಸಿದ್ದಾರೆ. ಧನಂಜಯ್ ಅವರಿಗೆ ಅಮೃತಾ ಅಯ್ಯಂಗರ್ ನಾಯಕಿಯಾಗಿ ನಟಿಸಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಧನಂಜಯ್ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಆನಂದ್ ಆಡಿಯೋ ಸಾಂಗ್ಸ್ ಖರೀದಿಸಿದ್ದು, ಈಗಾಗಲೇ ಹಾಡುಗಳು ಹಿಟ್ ಆಗಿವೆ. ಸರಕಾರದ ಶೇ.50 ಸೀಟು ನಿರ್ಬಂಧದ ಕಾರಣದಿಂದ ಸ್ಟಾರ್ ನಟರ ಚಿತ್ರಗಳು ತೆರೆಯ ಮೇಲೆ ಬರಲು ಹಿಂದೇಟು ಹಾಕುತ್ತಿವೆ. ಶಿವರಾಜ್ ಕುಮಾರ್ ಅವರ ಭಜರಂಗಿ 2, ಸುದೀಪ್ ಅವರ ಕೋಟಿಗೊಬ್ಬ 3, ದುನಿಯಾ ವಿಜಯ್ ಅವರ ಸಲಗ ಚಿತ್ರಗಳು ಚಿತ್ರಮಂದಿರದಲ್ಲಿ ಪೂರ್ಣಪ್ರಮಾಣದಲ್ಲಿ ಪ್ರೇಕ್ಷಕರ ಉಪಸ್ಥಿತಿಯ ಅನುಮತಿಗಾಗಿ ಕಾದು ನೋಡುತ್ತಿವೆ.
ಕೆಲ ಚಿತ್ರ ತಂಡಗಳು ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿದ್ದರೂ ಸರಕಾರ ಪ್ರೇಕ್ಷಕರ ಸಂಖ್ಯೆಯ ನಿರ್ಬಂಧವನ್ನು ತೆಗೆದು ಹಾಕದಿದ್ದಲ್ಲಿ ಈ ಚಿತ್ರಗಳು ಮತ್ತೆ ರಿಲೀಸ್ ಡೇಟ್ ಮುಂದೂಡುವ ಸಾಧ್ಯತೆ ಇದೆ.
_______
Be the first to comment