ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಚಿತ್ರದ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.
ಟ್ರೈಲರ್ನಲ್ಲಿ ಧನಂಜಯ್ ಸ್ನೇಹಿತರಿಗಾಗಿ ಪ್ರಾಣ ಕೊಡಲು ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಆಟೋ ಓಡಿಸುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಗೆಳೆಯರ ಜೊತೆಗಿನ ಒಡನಾಟ ಶಂಕರನನ್ನು ಪ್ರೀತಿಸುವ ಹುಡುಗಿಗೆ ಇಷ್ಟವಿರುವುದಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗುವ ಸನ್ನಿವೇಶ ಟ್ರೈಲರ್ ನಲ್ಲಿದೆ. ಹಾಸ್ಯಮಿಶ್ರಿತ ಸಂಭಾಷಣೆಗಳು, ತಾಯಿ ಸೆಂಟಿಮೆಂಟ್, ಆಕ್ಷನ್ ದೃಶ್ಯಗಳು ಟ್ರೈಲರ್ ನಲ್ಲಿ ಇವೆ. ಧನಂಜಯ್ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ.
ಬಡವ ರಾಸ್ಕಲ್’ ಚಿತ್ರ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಚಿತ್ರತಂಡ ಜನಸಾಮಾನ್ಯರನ್ನೇ ಬಳಸಿಕೊಂಡು ಪ್ರಚಾರ ನಡೆಸಿದ್ದು ‘ಡಿ.24ಕ್ಕೆ ಬಡವ ರಾಸ್ಕಲ್’ ಎನ್ನುವ ಸ್ಲೇಟ್ ಎಲ್ಲೆಡೆ ಕಂಡು ಬರುತ್ತಿದೆ.
ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ‘ಬಡವ ರಾಸ್ಕಲ್’ ಸುತ್ತುತ್ತದೆ. ‘ಡಾಲಿ ಪಿಕ್ಚರ್’ ಬ್ಯಾನರ್ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ‘ಮಠ’ ಗುರುಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಧನಂಜಯ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ, ವಿನೋದ್ ಸಾಹಸ ನಿರ್ದೇಶನವಿದೆ.
ಸದ್ಯ ಧನಂಜಯ್ ಕೈಯಲ್ಲಿ ಹಲವು ಚಿತ್ರಗಳಿದ್ದು, ಮಾನ್ಸೂನ್ ರಾಗ, ಹೆಹೆಡ್ಬುಷ್, ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಟಾಲಿವುಡ್ನ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
____





Be the first to comment