ಕನ್ನಡದ ರೂಪಾ ಅಯ್ಯರ್ ನಿರ್ದೇಶಿಸಿ ನಟಿಸಿರುವ ಹಿಂದಿ ಚಿತ್ರ ‘ಆಜಾದ್ ಭಾರತ್’ ಜನವರಿ 2ರಂದು ಬಿಡುಗಡೆಯಾಗಲಿದೆ.
ಸುಭಾಷ್ ಚಂದ್ರ ಬೋಸ್ ಅವರ ಜನ್ಮ ತಿಂಗಳಿನಂದು ‘ಆಜಾದ್ ಭಾರತ್’ ಭಾರತದಾದ್ಯಂತ 1,000ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಚಿತ್ರ ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಕಥೆ, ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಮೊದಲ ಮಹಿಳಾ ಸೈನ್ಯದ ಆಸಕ್ತಿದಾಯಕ ವಿಚಾರಗಳನ್ನು ತೆರೆಮೇಲೆ ತರಲಿದೆ.
ರೂಪಾ ಅಯ್ಯರ್ ಅವರು ನೀರಾ ಆರ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಿತಾ ಚಂದ್ರಶೇಖರ್ ದುರ್ಗಾ ಪಾತ್ರದಲ್ಲಿ ಮತ್ತು ಶ್ರೇಯಸ್ ತಲ್ಪಡೆ ನೇತಾಜಿ ಪಾತ್ರದಲ್ಲಿ ನಟಿಸಿದ್ದಾರೆ. ಸುರೇಶ್ ಒಬೆರಾಯ್, ವೈಜನಾಥ್ ಬಿರಾದಾರ್, ಸುಚೇಂದ್ರ ಪ್ರಸಾದ್ ಮತ್ತು ಜೀ ಚಾನೆಲ್ ಮುಖ್ಯಸ್ಥ ಸುಭಾಷ್ ಚಂದ್ರ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ರೂಪಾ ಅಯ್ಯರ್ ಅವರ ಪತಿ ಗೌತಮ್ ಶ್ರೀವತ್ಸ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತ ಫಡ್ನವಿಸ್ ಹಾಡಿರುವ ಒಂದು ಹಾಡು ಸೇರಿದಂತೆ ಒಟ್ಟು ಏಳು ಹಾಡುಗಳಿವೆ. ಯಶ್ ರಾಜ್ ಸ್ಟುಡಿಯೋದಲ್ಲಿ 11.1 ಧ್ವನಿ ತಂತ್ರಜ್ಞಾನದೊಂದಿಗೆ ರೀ-ರೆಕಾರ್ಡಿಂಗ್ ಪೂರ್ಣಗೊಂಡಿದೆ.
ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಮಾಡಿರುವ ಈ ಚಿತ್ರವನ್ನು ರೂಪಾ ಅಯ್ಯರ್, ಜಯಗೋಪಾಲ್ ಮತ್ತು ರಾಜೇಂದ್ರ ರಾಜನ್ ನಿರ್ಮಿಸಿದ್ದಾರೆ. ಮೊದಲಿಗೆ ‘ನೀರಾ ಆರ್ಯ’ ಎಂದು ಹೆಸರಿಡಲಾಗಿದ್ದ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ‘ಆಜಾದ್ ಭಾರತ್’ ಎಂದು ಬದಲಿಸಿದೆ. ಚಿತ್ರವು ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಲು ಸುಮಾರು ಮೂರು ವರ್ಷಗಳನ್ನು ತೆಗೆದುಕೊಂಡಿದೆ.
ರೂಪಾ ಅಯ್ಯರ್ ಅವರು ಸಂಸತ್ ಭವನ ಸೇರಿದಂತೆ ಗಣ್ಯರಿಗೆ ಚಿತ್ರವನ್ನು ಪ್ರದರ್ಶಿಸಲು ಯೋಜಿಸಿದ್ದಾರೆ.
—-





Be the first to comment